ಕ್ರಿಕೆಟ್

ಅಶ್ವಿನ್ ನಾಯಕತ್ವದ ಬಗ್ಗೆ ಯಾವುದೇ ನಿರ್ಧಾರವಿಲ್ಲ: ಅನಿಲ್ ಕುಂಬ್ಳೆ

Srinivasamurthy VN

ನವದೆಹಲಿ: ಮುಂದಿನ ಆವೃತ್ತಿಯ ಇಂಡಿಯನ್ ಪ್ರಿಮೀಯರ್ ಲೀಗ್ ನಲ್ಲಿ ನಾಯಕರಾಗಿ ರವಿಚಂದ್ರನ್ ಅಶ್ವಿನ್ ಅವರೇ ಮುಂದುವರೆಯುತ್ತಾರಾ ಎಂಬ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನೂತನ ಕೋಚ್ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿ ಆಯ್ಕೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಈ ಹಿಂದೆ ಕೋಚ್  ಆಗಿ ಕಾರ್ಯನಿರ್ವಹಿಸಿರುವ ಅನುಭವದಿಂದ ಬಹಳಷ್ಟು ಒಳ್ಳೆಯ ಪಾಠಗಳನ್ನು ಕಲಿತಿದ್ದೇನೆ. ಆಟಗಾರರು ಆದಷ್ಟು ಮಾನಸಿಕವಾಗಿ ನಿರಾಳವಾಗಿ ಇರುವಂತೆ ಮಾರ್ಗದರ್ಶನ ನೀಡುವುದು ಮುಖ್ಯವಾದ ಕೆಲಸ ಎಂದು ಹೇಳಿದರು.

ಅಂತೆಯೇ 'ನಾನು ಆರ್‌ಸಿಬಿಯಲ್ಲಿದ್ದಾಗ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಒಂದೆರಡು ಸಲ ತೀರಾ ಸನಿಹಕ್ಕೆ ಬಂದು ನಿರಾಶೆಗೊಂಡಿದ್ದೆವು. ಆದರೆ, ಮುಂಬೈ ಇಂಡಿಯನ್ಸ್‌ನೊಂದಿಗೆ ಇದ್ದಾಗ ಮೂರು ವರ್ಷ ಉತ್ತಮ ಫಲಿತಾಂಶ ಲಭಿಸಿತ್ತು. ಈ ಎಲ್ಲ ಅನುಭವಗಳು ಮುಂದಿನ ಕಾರ್ಯಕ್ಕೆ ಸಹಾಯಕವಾಗುತ್ತವೆ ಎಂದು ಹೇಳಿದರು. ಇದೇ ವೇಳೆ ಅಶ್ವಿನ್ ಪಂಜಾಬ್ ತಂಡದೊಂದಿಗೆ ನಾಯಕರಾಗಿ ಮುಂದುವರಿಯುತ್ತಾರೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ನಾವು ಶೀಘ್ರದಲ್ಲೇ ಇದರ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ. ತಂಡ ಸ್ಥಿರ ಪ್ರದರ್ಶನ ನೀಡಲು ಶ್ರಮಿಸಲಾಗುವುದು. ಯಾವ ಆಟಗಾರರನ್ನು ಕೈ ಬಿಡಬೇಕು ಯಾರನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸಲಾಗುವುದು ಎಂದು ಹೇಳಿದರು.
  
ಅಶ್ವಿನ್ ನಾಯಕತ್ವದಲ್ಲಿ, ಪಂಜಾಬ್ ತಂಡವು 2018 ರಲ್ಲಿ ಏಳನೇ ಮತ್ತು 2019 ರಲ್ಲಿ ಆರನೇ ಸ್ಥಾನವನ್ನು ಪಡೆದಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ತವರು ಸರಣಿಯಲ್ಲಿ ಅಶ್ವಿನ್ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ.

2020ನೇ ಆವೃತ್ತಿಯ ಐಪಿಎಲ್ ಸರಣಿಗೆ ಡಿಸೆಂಬರ್ ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

SCROLL FOR NEXT