ಕ್ರಿಕೆಟ್

3ನೇ ಟೆಸ್ಟ್, ಮೊದಲ ಇನ್ನಿಂಗ್ಸ್: 162 ರನ್ ಗಳಿಗೆ ದ.ಆಫ್ರಿಕಾ ಆಲೌಟ್, ಫಾಲೋ ಆನ್ ಹೇರಿದ ಭಾರತ

Srinivasamurthy VN

ಮೊದಲ ಇನ್ನಿಂಗ್ಸ್ ನಲ್ಲಿ ಫಾಫ್ ಡುಪ್ಲೆಸಿಸ್ ಪಡೆಗೆ 335 ರನ್ ಗಳ ಭಾರಿ ಹಿನ್ನಡೆ

ರಾಂಚಿ: ರಾಂಚಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಕೇವಲ 162 ರನ್ ಗಳಿಗೆ ಆಲೌಟ್ ಆಗಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ ಫಾಫ್ ಡುಪ್ಲೆಸಿಸ್ ಪಡೆ 335 ರನ್ ಗಳ ಭಾರಿ ಹಿನ್ನಡೆ ಅನುಭವಿಸಿದೆ.

ರಾಂಚಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ಕೇವಲ 162 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಆ ಮೂಲಕ ಡುಪ್ಲೆಸಿಸ್ ಪಡೆ ಭಾರತದ ವಿರುದ್ಧ 335 ರನ್ ಗಳ ಭಾರಿ ಹಿನ್ನಡೆ ಅನುಭವಿಸಿದ್ದು, ಭಾರತ ಇದೀಗ ಆಫ್ರಿಕಾಗೆ ಫಾಲೋ ಆನ್ ಹೇರಿದೆ.

ಆಫ್ರಿಕಾ ಮೊದಲ ಇನ್ನಿಂಗ್ಸ್ ಆರಂಭಿಸುತ್ತಿದ್ದಂತೆಯೇ ಶಮಿ ಮತ್ತು ಉಮೇಶ್ ಯಾದವ್ ಆರಂಭಿಕ ಆಘಾತ ನೀಡಿದರು. ಆಫ್ರಿಕಾದ ಆರಂಭಿಕ ಆಟಗಾರ ಎಲ್ಗಾರ್ ಶೂನ್ಯಕ್ಕೆ ಶಮಿಗೆ ವಿಕೆಟ್ ಒಪ್ಪಿಸಿದರೆ, ಡಿಕಾಕ್ ಕೂಡ ಕೇವಲ 4 ರನ್ ಗಳಿಸಿ ಉಮೇಶ್ ಯಾದವ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ ಗೆ ಬಂದ ಹಮ್ಜಾ (62 ರನ್) ಆಫ್ರಿಕಾದ ಪತನಕ್ಕೆ ಕೊಂಚ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದರೂ ಅವರ ಹೋರಾಟ 62 ರನ್ ಗಳಿಗೆ ಸೀಮಿತವಾಯಿತು. ಇದಕ್ಕೂ ಮೊದಲು ನಾಯಕ ಡುಪ್ಲೆಸಿಸ್ ಕೇವಲ 1 ರನ್ ಗಳಿಸಿ ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. 

ಬಳಿಕ ಕ್ರೀಸ್ ಗೆ ಬಂದ ಬವುಮಾ ಅವರು ಹಮ್ಜಾ ಜೊತೆ ಗೂಡ ಭಾರತೀಯ ಪ್ರಭಾವಿ ಬೌಲಿಂಗ್ ದಾಳಿಗೆ ತಿರುಗೇಟು ನೀಡುವ ಪ್ರಯತ್ನ ಮಾಡಿದರು. ಆದರೆ ಅವರ ಹೋರಾಟವೂ ಕೂಡ 32 ರನ್ ಗಳಿಗೆ ಸೀಮಿತವಾಯಿತು. ಈ ಹಂತದಲ್ಲಿ ಕೆಳ ಕ್ರಮಾಂಕದ ಆಟಗಾರ ಲಿಂಡೆ ಸಮಯೋಚಿತ ಬ್ಯಾಟಿಂಗ್ ನಡೆಸಿದರು. 37 ರನ್ ಗಳಿಸಿದ ಲಿಂಡೆ ಮತ್ತದೇ ಉಮೇಶ್ ಯಾದವ್ ಬೌಲಿಂಗ್ ನಲ್ಲಿ ವಿಕೆಟ್ ಕೈ ಚೆಲ್ಲಿದರು. ಅಂತಿಮವಾಗಿ ಆಫ್ರಿಕಾ ತಂಡ ಕೇವಲ 162 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು, ಮೊದಲ ಇನ್ನಿಂಗ್ಸ್ ನಲ್ಲಿ 335 ರನ್ ಗಳ ಭಾರಿ ಹಿನ್ನಡೆ ಅನುಭವಿಸಿದೆ.

ಭಾರತದ ಪರ ಉಮೇಶ್ ಯಾದವ್ 3 ವಿಕೆಟ್ ಕಬಳಿಸಿದ್ದು, ಶಮಿ, ರವೀಂದ್ರ ಜಡೇಜಾ, ಶೆಬಾಜ್ ನದೀಮ್ ತಲಾ 2 ವಿಕೆಟ್ ಗಳಿಸಿದ್ದಾರೆ. 

ಇದೀಗ ಭಾರತ ತಂಡ ಆಫ್ರಿಕಾಗೆ ಫಾಲೋ ಆನ್ ಹೇರಿದೆ.

SCROLL FOR NEXT