ಕ್ರಿಕೆಟ್

ಉಗ್ರರ ಭೀತಿಯಲ್ಲಿ ಟೀಂ ಇಂಡಿಯಾ: ಬಿಗಿ ಭದ್ರತೆ ಕಲ್ಪಿಸುವಂತೆ ದೆಹಲಿ ಪೊಲೀಸರಿಗೆ ಸೂಚನೆ

Nagaraja AB

ನವ ದೆಹಲಿ: ಟೀಂ ಇಂಡಿಯಾ ಅದರಲ್ಲೂ ವಿಶೇಷವಾಗಿ ನಾಯಕ ವಿರಾಟ್ ಕೊಹ್ಲಿ ಅವರು ಉಗ್ರರ ಹಿಟ್ ಲಿಸ್ಟ್ ನಲ್ಲಿದ್ದಾರೆ.ಈ ಕುರಿತ ಅನಾಮದೇಯ ಬೆದರಿಕೆ ಪತ್ರವೊಂದು ರಾಷ್ಟ್ರೀಯ ತನಿಖಾ ದಳಕ್ಕೆ ಬಂದಿದ್ದು, ನವೆಂಬರ್ 3ರಿಂದ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಟೀಂ ಇಂಡಿಯಾಕ್ಕೆ ಬಿಗಿ ಭದ್ರತೆ ಒದಗಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ, ಬಿಜೆಪಿ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ, ಆರ್ ಎಸ್ ಎಸ್ ಸರಸಂಘ ಸಂಚಾಲಕ ಮೋಹನ್ ಭಾಗವತ್ ಈ ಪಟ್ಟಿಯಲ್ಲಿದ್ದಾರೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ತನಿಖಾ ದಳ  ಬೆದರಿಕೆ ಪತ್ರವನ್ನು ಬಿಸಿಸಿಐಗೆ ವರ್ಗಾಯಿಸಿದೆ. ಕೇರಳದ ಕೋಝಿಕೋಡ್ ಮೂಲದ ಅಖಿಲ ಭಾರತ ಲಷ್ಕರ್ ಕೊಹ್ಲಿ ಸೇರಿದಂತೆ ಪ್ರಮುಖ ರಾಜಕಾರಣಿಗಳನ್ನು ಟಾರ್ಗೆಟ್ ಮಾಡಿದಿರುವುದು ಕಂಡುಬಂದಿದೆ. 

ಇದೊಂದು ಹುಸಿ ಬೆದರಿಕೆ ಪತ್ರವೆಂದು ಮತ್ತೊಂದು ಮೂಲಗಳಿಂದ ತಿಳಿದುಬಂದಿದೆ ಆದರೆ, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪಂದ್ಯ ಹಾಗೂ ಆಟಗಾರರಿಗೆ ಬಿಗಿ ಭದ್ರತೆ ಕಲ್ಪಿಸಬೇಕಾಗಿದೆ. 

 ಬಾಂಗ್ಲಾದೇಶ ವಿರುದ್ಧದ ಮೂರು ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಭಾರತ ಆಡಲಿದ್ದು, ಭಾನುವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ. 

SCROLL FOR NEXT