ಕ್ರಿಕೆಟ್

ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್: ಅಗ್ರ ಸ್ಥಾನದಲ್ಲಿ ಭಾರತ

Srinivasamurthy VN

ದುಬೈ: ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿ ಜಯದ ಬೆನ್ನಲ್ಲೇ ಐಸಿಸಿಯ ಟೆಸ್ಟ್ ಚಾಂಪಿಯನ್ ಶಿಪ್ ಟೂರ್ನಿಯ ಅಂಕ ಪಟ್ಟಿಯಲ್ಲಿ ಭಾರತ ತಂಡ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ.

ಹೌದು.. ಐಸಿಸಿ ನಡೆಸುತ್ತಿರುವ ಸುದೀರ್ಘ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡ ಅಗ್ರಸ್ಥಾನಕ್ಕೇರಿದೆ. ಪಟ್ಟಿಯಲ್ಲಿ ಭಾರತ ತಂಡ ಒಟ್ಟು 120 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದು, ತಲಾ 60 ಅಂಕಗಳನ್ನು ಗಳಿಸಿರುವ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳು ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.

ಇನ್ನು ಆ್ಯಶಸ್ ಸರಣಿಯಾಡುತ್ತಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ತಲಾ 32 ಅಂಕಗಳೊಂದಿಗೆ 4 ಮತ್ತು ಐದನೇ ಸ್ಥಾನಗಳಲ್ಲಿವೆ. ಉಳಿದಂತೆ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಇನ್ನೂ ಅಂಕಗಳ ಖಾತೆ ತೆರೆದಿಲ್ಲ.

ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಐಸಿಸಿ ಟೆಸ್ಟ್ ಸರಣಿಯೊಂದಕ್ಕೆ 120 ಅಂಕಗಳನ್ನು ಮೀಸಲಿರಿಸಿದೆ. ಸರಣಿಯಲ್ಲಿ ತಂಡಗಳು ಆಡುವ ಪಂದ್ಯಗಳಿಗೆ ಅನುಗುಣವಾಗಿ ಈ ಅಂಕಗಳು ವಿಭಜಿಸಲ್ಪಡುತ್ತವೆ. ಭಾರತ ವಿಂಡೀಸ್ ವಿರುದ್ಧ 2 ಪಂದ್ಯಗಳ ಸರಣಿಯಾಡಿದ್ದು, ಹೀಗಾಗಿ 120 ಅಂಕಗಳನ್ನು ಪ್ರತೀ ಪಂದ್ಯಕ್ಕೆ 60 ಅಂಕಗಳಂತೆ ಮೀಸಲಿಡಲಾಗಿತ್ತು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆ್ಯಶಸ್ ಸರಣಿ ಒಟ್ಟು 5 ಪಂದ್ಯಗಳ ಸರಣಿಯಾಗಿದ್ದು, ಹೀಗಾಗಿ ಈ ಸರಣಿಯ ಪ್ರತೀ ಪಂದ್ಯಕ್ಕೆ 24 ಅಂಕಗಳನ್ನು ಮೀಸಲಿಡಲಾಗಿದೆ.

SCROLL FOR NEXT