ಕ್ರಿಕೆಟ್

ಜಸ್ ಪ್ರೀತ್ ಬುಮ್ರಾ ವಿಶ್ವ ಕ್ರಿಕೆಟ್ ನ ಪರಿಪೂರ್ಣ ಬೌಲರ್: ನಾಯಕ ವಿರಾಟ್ ಕೊಹ್ಲಿ

Srinivasamurthy VN

ಜಮೈಕಾ: ವಿಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ಅವರನ್ನು ನಾಯಕ ವಿರಾಟ್ ಕೊಹ್ಲಿ ಶ್ಲಾಘಿಸಿದ್ದು, ಬುಮ್ರಾ ವಿಶ್ವ ಕ್ರಿಕೆಟ್ ಪರಿಪೂರ್ಣ ಶ್ರೇಷ್ಠ ಬೌಲರ್ ಎಂದು ಹೇಳಿದ್ದಾರೆ.

ನಿನ್ನೆ ಮುಕ್ತಾಯವಾದ ವಿಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಹ್ಯಾಟ್ರಿಕ್ ಸಹಿತ ಎರಡೂ ಇನ್ನಿಂಗ್ಸ್ ಗಳಿಂದ 7 ವಿಕೆಟ್ ಗಳನ್ನು ಪಡೆದ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದರು. ಅಲ್ಲದೆ ಭಾರತ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಗಳಿಸಿದ ಸಾಧನೆ ಮಾಡಿದ ಮೂರನೇ ಆಟಗಾರ ಎಂಬ ಕೀರ್ತಿಗೂ ಭಾಜನರಾದರು. ಇದೀಗ ಬುಮ್ರಾ ಅವರ ಈ ಪ್ರದರ್ಶನವನ್ನು ನಾಯಕ ವಿರಾಟ್ ಕೊಹ್ಲಿ ಮುಕ್ತ ಕಂಠದಿಂದ ಶ್ಲಾಘಿಸಿದ್ದು, ಬುಮ್ರಾ ವಿಶ್ವ ಕ್ರಿಕೆಟ್ ಪರಿಪೂರ್ಣ ಬೌಲರ್ ಎಂದು ಹೇಳಿದ್ದಾರೆ.

ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್ ನ ಮೂರೂ ಮಾದರಿಗಳಲ್ಲಿ ಬುಮ್ರಾ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಹೀಗಾಗಿ ನಾನು ಆತ ವಿಶ್ವಕ್ರಿಕೆಟ್ ನ ಪರಿಪೂರ್ಣ ಬೌಲರ್ ಎಂದು  ಹೇಳಬಲ್ಲೆ. ತಮ್ಮ ಆ್ಯಂಗಲ್ ನಿಂದಾಗಿ ಬುಮ್ರಾ ಬ್ಯಾಟ್ಸ್ ಮನ್ ಗಳನ್ನು ಗೊಂದಲಕ್ಕೀಡು ಮಾಡುತ್ತಾರೆ. ಅಲ್ಲದೆ ಅವರ ಸ್ವಿಂಗ್ ಮತ್ತು ಪೇಸ್ ಕೂಡ ಪರಿಣಾಮಕಾರಿಯಾಗಿರುತ್ತದೆ. ಟಿ20 ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿದ್ದ ಬುಮ್ರಾ ಇದೀಗ ಟೆಸ್ಟ್ ಕ್ರಿಕೆಟ್ ನಲ್ಲೂ ಮಿಂಚು ಹರಿಸುತ್ತಿದ್ದಾರೆ. ಆ ಮೂಲಕ ಜನರ ಆಲೋಚನೆಗಳನ್ನೇ ತಲೆಕೆಳಗೆ ಮಾಡಿದ್ದಾರೆ ಎಂದು ಹೇಳಿದರು.

ಅಂತೆಯೇ ಓರ್ವ ನಾಯಕನಾಗಿ ಇಂತಹ ಆಟಗಾರರನ್ನು ಹೊಂದುವುದು ಹೆಮ್ಮೆಯ ಸಂಗತಿ. ನಾನು ನಿಜಕ್ಕೂ ಲಕ್ಕಿ ನಾಯಕ. ಇಂತಹ ಬೌಲರ್ ಗಳು ದೊರೆಯುವುದೇ ಅಪರೂಪ. ಹೊಸ ಚೆಂಡಿನಲ್ಲಿ ಬುಮ್ರಾ ಎಸೆಯುವ ಮೊದಲ ಐದರಿಂದ ಆರು ಓವರ್ ಗಳು ಕಠಿಣವಾಗಿರುತ್ತವೆ. ಬ್ಯಾಟ್ಸ್ ಮನ್ ರನ್ ಗಳಿಸಲು ಅಲ್ಲ ವಿಕೆಟ್ ಉಳಿಸಿಕೊಳ್ಳಲು ಪರದಾಡಬೇಕು ಎಂದು ಕೊಹ್ಲಿ ಹೇಳಿದ್ದಾರೆ.

ಅಂತೆಯೇ ಜಡೇಜಾ ಬೌಲಿಂಗ್ ಅನ್ನೂ ಶ್ಲಾಘಿಸಿದ ಕೊಹ್ಲಿ, ಜಡೇಜಾ ತಂಡಕ್ಕೆ ಆಯ್ಕೆಯಾದಾಗ ಹಲವರು ಹುಬ್ಬೇರಿಸಿದ್ದರು. ಆದರೆ ಅವರಿಗೆ ಈಗ ಉತ್ತರ ದೊರೆತಿರಬಹುದು. ಜಡೇಜಾ ಮೂಲಕ ಬೌಲಿಂಗ್ ವಿಭಾಗ ಪರಿಪೂರ್ಣವಾಗಿದೆ. ತಂಡದ ಅತ್ಯಂತ ಸ್ಥಿರ ಪ್ರದರ್ಶನ ನೀಡುವ ಆಟಗಾರರಲ್ಲಿ ಜಡೇಜಾ ಪ್ರಮುಖರು.  ಪಿಚ್ ನಮಗೆ ವ್ಯತಿಕ್ತವಾಗಿ ವರ್ತಿಸುತ್ತಿದ್ದರೂ ಅಲ್ಲಿಯೂ ಜಡೇಜಾ ಮ್ಯಾಜಿಕ್ ಮಾಡಬಲ್ಲರು. ಆ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸುವಂತೆ ನೆರವಾಗಬಲ್ಲರು ಎಂದು ಹೇಳಿದರು.

ಇದೇ ವೇಳೆ ಬ್ಯಾಟಿಂಗ್ ವಿಭಾಗದಲ್ಲಿ ರಹಾನೆ, ಹನುಮ ವಿಹಾರಿ ಅವರ ಬ್ಯಾಟಿಂಗ್ ಕೊಂಡಾಡಿದ ಕೊಹ್ಲಿ, ಹನುಮ ವಿಹಾರಿಯನ್ನು ಈ ಪ್ರವಾಹಸ ಅತ್ಯುತ್ತಮ ಶೋಧ ಎಂದು ಶ್ಲಾಘಿಸಿದರು. ಒತ್ತಡದ ಸಂದರ್ಭವನ್ನು ನಿಭಾಸಿಕೊಂಡು ಬ್ಯಾಟಿಂಗ್ ಮಾಡಿದ ರೀತಿ ಅದ್ಭುತ ಎಂದು ಕೊಹ್ಲಿ ಹೇಳಿದರು.

ಇನ್ನು ಭಾರತ ತನ್ನ ಮುಂದಿನ ಸರಣಿಯನ್ನು ಭಾರತದಲ್ಲಿ ಆಡಲಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಅಕ್ಟೋಬರ್ 2ರಿಂದ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ.

SCROLL FOR NEXT