ಕ್ರಿಕೆಟ್

ಉಗ್ರ ದಾಳಿ ಭೀತಿ, ಹಿರಿಯ ಆಟಗಾರರ ಅನುಪಸ್ಥಿತಿಯಲ್ಲೂ ಲಂಕಾದಿಂದ ಪಾಕ್ ಪ್ರವಾಸ!

Srinivasamurthy VN

ತಂಡದೊಂದಿಗೆ ಲಂಕಾ ಕ್ರಿಕೆಟ್ ಬೋರ್ಡ್ ಕಾರ್ಯದರ್ಶಿ ಮೋಹನ್ ಡಿಸಿಲ್ವಾ ಮತ್ತು ತಂಡ ಕೂಡ ಪಾಕ್ ಗೆ ಪಯಣ

ಕೊಲಂಬೋ: ಉಗ್ರರ ದಾಳಿ ಭೀತಿ, ಹಿರಿಯ ಆಟಗಾರರೇ ಟೂರ್ನಿಯಿಂದ ಹಿಂದೆ ಸರಿದಿರುವ ಈ ಪರಿಸ್ಥಿತಿಯಲ್ಲೂ ಶ್ರೀಲಂಕಾ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸಕ್ಕೆ ತೆರಳುವುದಾಗಿ ಘೋಷಣೆ ಮಾಡಿದೆ.

ಈ ಕುರಿತಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಮೋಹನ್ ಡಿಸಿಲ್ವಾ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, 'ಪಾಕಿಸ್ತಾನಕ್ಕೆ ತೆರಳಲು ರಕ್ಷಣಾ ಸಚಿವರಿಂದ ನಾವು ಹಸಿರು ನಿಶಾನೆ ಪಡೆದಿದ್ದೇವೆ. ಪಾಕ್ ಪ್ರವಾಸ ನಾವು ಯೋಜಿಸಿದಂತೆಯೇ ನಡೆಯಲಿದೆ. ನಾನು ಹಾಗೂ ನಮ್ಮ ಕಚೇರಿ ಸಿಬ್ಬಂದಿ ಶ್ರೀಲಂಕಾ ತಂಡಕ್ಕೆ ಸಾಥ್ ನೀಡಲಿದ್ದೇವೆ' ಎಂದು ಹೇಳಿದ್ದಾರೆ.

ಶ್ರೀಲಂಕಾ ಆಟಗಾರರ ಮೇಲೆ ಪಾಕಿಸ್ತಾನದಲ್ಲಿ ಉಗ್ರ ದಾಳಿಯಾಗುವ ಸಾಧ್ಯತೆಯಿದೆ ಎಂದು ಕಳೆದ ವಾರ ವರದಿಯಾದ ಬಳಿಕ ರಕ್ಷಣಾ ಸಚಿವಾಲಯ ತನಿಖೆಗೆ ಶಿಫಾರಸು ಮಾಡಿತ್ತು. 2009ರಲ್ಲಿ ಲಾಹೋರ್‌ ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಶ್ರೀಲಂಕಾ ತಂಡವನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಲಂಕಾದ ಆರು ಆಟಗಾರರು ಗಾಯಗೊಂಡಿದ್ದರು. ಪಾಕಿಸ್ತಾನದ ಆರು ಪೊಲೀಸರು ಹಾಗೂ ಇಬ್ಬರು ನಾಗರಿಕರು ಮೃತಪಟ್ಟಿದ್ದರು.

ಶ್ರೀಲಂಕಾ ತಂಡ ಪ್ರಯಾಣಿಸುತ್ತಿದ್ದ ಬಸ್ ನ ಚಾಲಕನ ಸಾಹಸದಿಂದ ಶ್ರೀಲಂಕಾ ಆಟಗಾರರು ಬದುಕುಳಿದಿದ್ದರು. ಈ ಘಟನೆ ಇನ್ನೂ ಹಸಿರಾಗಿರುವಂತೆಯೇ ಮತ್ತೆ ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕಟ್ ಗೆ ಅಸ್ತು ಎಂದಿದೆ. ಆದರೆ ಈ ಸರಣಿಯಲ್ಲಿ ಶ್ರೀಲಂಕಾದ ಹಿರಿಯ ಆಟಗಾರರು ಹಿಂದೆ ಸರಿದಿದ್ದು, 2ನೇ ಹಂತದ ಆಟಗಾರರು ಪಾಕ್ ಪ್ರವಾಸ ಮಾಡುವ ಸಾಧ್ಯತೆ ಇದೆ. 

ಪಾಕಿಸ್ತಾನದಲ್ಲಿ ಶ್ರೀಲಂಕಾ ತಂಡ ಒಟ್ಟು 6 ಏಕದಿನ ಪಂದ್ಯವನ್ನಾಡಲಿದ್ದು, ಈಗಾಗಲೇ ತಲಾ 3 ಪಂದ್ಯಗಳ ಏಕದಿನ ಹಾಗೂ ಟಿ-20 ಸರಣಿಗೆ ತಂಡವನ್ನು ಪ್ರಕಟಿಸಿದೆ.

SCROLL FOR NEXT