ಕ್ರಿಕೆಟ್

ಅವಕಾಶ ಸಿಕ್ಕರೆ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಸಿದ್ಧ- ಸುರೇಶ್ ರೈನಾ

Nagaraja AB

ನವದೆಹಲಿ: ಕಳೆದ ಒಂದು ವರ್ಷದಿಂದ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿರುವ ಸುರೇಶ್ ರೈನಾ ಅವರು ಮತ್ತೊಮ್ಮೆ ತಂಡಕ್ಕೆ ಮರಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ 2018ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಟಿ-20 ಪಂದ್ಯದಲ್ಲಿ ಆಡಿದ್ದ ಸುರೇಶ್ ರೈನಾ ಅವರು ಮತ್ತೇ ರಾಷ್ಟ್ರೀಯ ತಂಡಕ್ಕೆ ಮರಳಲೇ ಇಲ್ಲ. ಆದರೆ, ಪ್ರಸ್ತುತ ಕೊಹ್ಲಿ ನಾಯಕತ್ವದ ಭಾರತ ತಂಡದಲ್ಲಿ (ಸೀಮಿತ ಓವರ್ ಗಳಲ್ಲಿ ) ನಾಲ್ಕನೇ ಕ್ರಮಾಂಕದ ಸಮಸ್ಯೆ ಇನ್ನೂ ಬಗೆಹರಿದಿಲ್ಲ.ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಸಿದ್ಧತೆಯಲ್ಲಿದ್ದು, ಆದಷ್ಟು ಬೇಗ ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆ ಬಗೆಹರಿಸಿಕೊಳ್ಳುವ ಹಾದಿಯಲ್ಲಿದೆ.

ಈ ಬಗ್ಗೆ ಮಾತನಾಡಿರುವ ಸುರೇಶ್ ರೈನಾ, ನಾಲ್ಕನೇ ಕ್ರಮಾಂಕದಲ್ಲಿ ಆಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಆಸ್ಟ್ರೇಲಿಯಾದಲ್ಲಿ ನಡೆಯುವ 2020-21ರ ಟಿ-20 ವಿಶ್ವಕಪ್ ವೇಳೆಗೆ ತಂಡದಲ್ಲಿ ಸ್ಥಾನ ಪಡೆಯುತ್ತೇನೆ. ಜತೆಗೆ, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಸೀಮಿತ ಓವರ್ ಗಳಲ್ಲಿ ಮೊದಲ ಬಾರಿಗೆ ಭಾರತ ತಂಡವನ್ನು ನಾನು ಪ್ರತಿನಿಧಿಸಿದಾಗ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದೆ. ಅದೇ ರೀತಿ ಮುಂಬರುವ ಟಿ-20 ವಿಶ್ವಕಪ್‍ಗೆ ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು 32ರ ಪ್ರಾಯದ ಸುರೇಶ್ ರೈನಾ ಹೇಳಿಕೊಂಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಸೀಮಿತ ಓವರ್ ಗಳ  ಭಾರತ ತಂಡದಲ್ಲಿ ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಐಸಿಸಿ ವಿಶ್ವಕಪ್‍ಗೂ ಮುನ್ನ ಅಂಬಾಟಿ ರಾಯುಡು ಅವರಿಗೆ ಅವಕಾಶ ನೀಡಿತ್ತು. ಆದರೆ, ಅವರು ಸಿಕ್ಕ ಅವಕಾಶಗಳನ್ನು  ಕೈ ಚೆಲ್ಲಿಕೊಂಡರು. 

ವಿಶ್ವಕಪ್ ಟೂರ್ನಿಯಲ್ಲಿ ವಿಜಯ್ ಶಂಕರ್ ಅವರಿಗೆ ನೀಡಲಾಗಿತ್ತು. ಆ ವೇಳೆ ಅವರು ಗಾಯದಿಂದಾಗಿ ಟೂರ್ನಿಯಿಂದ ಹೊರ ನಡೆದಿದ್ದರು. ಪ್ರಸ್ತುತ ರಿಷಭ್ ಪಂತ್ ಅವರಿಗೆ ನಾಲ್ಕನೇ ಕ್ರಮಾಂಕ ನೀಡಲಾಗಿದೆ.ರಿಷಭ್ ಪಂತ್ ಕೂಡ ನಾಲ್ಕನೇ ಕ್ರಮಾಂಕದಲ್ಲಿ ಯಶಸ್ವಿಯಾಗುತ್ತಿಲ್ಲ. ಅವರು ಕೂಡ ಎಡವುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ  ಹಿರಿಯ ಎಡಗೈ ಬ್ಯಾಟ್ಸಮನ್  ಸುರೇಶ್ ರೈನಾ, ಪಂತ್ ತನ್ನ ಸ್ವಾಭಾವಿಕ ಬ್ಯಾಟಿಂಗ್ ಆಡುತಿಲ್ಲ. ಹಾಗಾಗಿ, ಅವರು ವಿಫಲರಾಗುತ್ತಿದ್ದಾರೆ. ಅವರೊಮ್ಮೆ ಎಂ.ಎಸ್ ಧೋನಿ ಅವರ ಬಳಿ ಮಾತನಾಡುವುದು ಒಳಿತು ಎಂದು ಸಲಹೆ ನೀಡಿದ್ದಾರೆ.

SCROLL FOR NEXT