ಕ್ರಿಕೆಟ್

ಆಸಕ್ತಿ ಸಂಘರ್ಷ: ಬಿಸಿಸಿಐ ನೊಟೀಸ್, ಸಿಎಸಿ ಸದಸ್ಯೆ ಹುದ್ದೆಗೆ ಶಾಂತಾ ರಂಗಸ್ವಾಮಿ ರಾಜೀನಾಮೆ 

Sumana Upadhyaya

ನವದೆಹಲಿ; ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಸದಸ್ಯೆ ಮತ್ತು ಭಾರತೀಯ ಕ್ರಿಕೆಟರ್ ಅಸೋಸಿಯೇಷನ್ ನ ನಿರ್ದೇಶಕಿ ಸ್ಥಾನಕ್ಕೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ರಾಜೀನಾಮೆ ನೀಡಿದ್ದಾರೆ.


ಬಿಸಿಸಿಐ ಎಥಿಕ್ಸ್ ಅಧಿಕಾರಿ ಡಿ.ಕೆ.ಜೈನ್ ಅವರು ಆಸಕ್ತಿ ಸಂಘರ್ಷವಿದೆ ಎಂದು ಹೇಳಿ ನೊಟೀಸ್ ನೀಡಿದ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ್ದಾರೆ. 


ಸಿಎಸಿ ವರ್ಷಕ್ಕೆ ಒಂದೋ, ಎರಡೋ ಬಾರಿ ಸೇರಿ ಸಭೆ ನಡೆಸುತ್ತದೆ, ಇಲ್ಲಿ ಸಂಘರ್ಷದ ಮಾತು ಹೇಗೆ ಬರುತ್ತದೆ ಎಂದು ನನಗೆ ಅರ್ಥವಾಗುತ್ತಿಲ್ಲ, ನನಗೆ ಬೇರೆ ಯೋಜನೆಗಳಿವೆ ಹೀಗಾಗಿ ಸಮಿತಿಯಿಂದ ಹೊರಬರಲು ನಿರ್ಧರಿಸಿದೆ ಎಂದು ಶಾಂತಾ ರಂಗಸ್ವಾಮಿ ತಿಳಿಸಿದ್ದಾರೆ.


ಕಪಿಲ್ ದೇವ್ ಮತ್ತು ಅಂಶುಮಾನ್ ಗಾಯೆಕ್ ವಾಡ್ ಅವರು ಸಹ ಸದಸ್ಯರಾಗಿರುವ ಸಿಎಸಿಗೆ ಶಾಂತಾ ಅವರು ತಮ್ಮ ರಾಜೀನಾಮೆ ಪತ್ರವನ್ನು ಆಡಳಿತಾಧಿಕಾರಿಗಳ ಸಮಿತಿ ಮತ್ತು ಮಂಡಳಿಯ ಸಿಇಒ ರಾಹುಲ್ ಜೊಹ್ರಿ ಅವರಿಗೆ ಇಮೇಲ್ ಮೂಲಕ ಇಂದು ಬೆಳಗ್ಗೆ ಕಳುಹಿಸಿದ್ದಾರೆ.


ಸಿಎಸಿ ಸಮಿತಿಯಲ್ಲಿರುವುದು ಗೌರವದ ಹುದ್ದೆ. ಆಡಳಿತಾತ್ಮಕ ಹುದ್ದೆಗೆ ಸೂಕ್ತ ಮಾಜಿ ಕ್ರಿಕೆಟರನ್ನು ಹುಡುಕುವುದು ಈ ಸಂದರ್ಭದಲ್ಲಿ ಕಷ್ಟವಿದೆ. ಐಸಿಎಗೆ ಚುನಾವಣೆ ನಡೆಯುವ ಮೊದಲೇ ನಾನು ರಾಜೀನಾಮೆ ನೀಡಿದ್ದೇನೆ ಎಂದು ಶಾಂತಾ ರಂಗಸ್ವಾಮಿ ಹೇಳಿದ್ದಾರೆ.

SCROLL FOR NEXT