ಕ್ರಿಕೆಟ್

ದಾದಾರಂತೆ ಧೋನಿ, ಕೊಹ್ಲಿ ನನಗೆ ಬೆಂಬಲ ನೀಡಲಿಲ್ಲ: ಕೊನೆಗೂ ಮೌನ ಮುರಿದ ಯುವಿ

Manjula VN

ನವದೆಹಲಿ: ಹೋಲಿಕೆ ಮಾಡುವುದಾದರೆ ಸೌರವ್ ಗಂಗೂಲಿಯಂತೆ ಎಂ.ಎಸ್.ಧೋನಿಯಾಗಲೀ, ವಿರಾಟ್ ಕೊಹ್ಲಿಯಾಗಲೀ ಯಾರೂ ನನಗೆ ದಾದಾರಷ್ಟು ಬೆಂಬಲ ನೀಡಿರಲಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ. 

ಸ್ಫೋರ್ಟ್ಸ್ ಸ್ಟಾರ್ ನಡೆಸಿರುವ ಸಂದರ್ಶನದಲ್ಲಿ ಮಾತನಾಡಿರುವ ಯುವರಾಜ್ ಸಿಂಗ್ ಅವರು, ಸೌರವ್ ಗಂಗೂಲಿಯಿಂದ ಹಿಡಿದು ವಿರಾಟ್ ಕೊಹ್ಲಿವರೆಗೆ ಯಾವ ರೀತಿಯ ನಾಯಕರು ಬೆಂಬಲವಾಗಿ ನಿಂತರು ಎಂಬುದನ್ನು ಹೇಳಿಕೊಂಡಿದ್ದಾರೆ. 

ಮಾಜಿ ನಾಯಕರುಗಳಾದ ಸೌರವ್ ಗಂಗೂಲು ಹಾಗೂ ಧೋನಿ ಭಾರತೀಯ ಕ್ರಿಕೆಟ್'ಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಈ ಇಬ್ಬರ ಮಧ್ಯೆ ಯಾರು ಶ್ರೇಷ್ಠ ನಾಯಕ ಎಂಬುದನ್ನು ಹೇಳುವುದು ಕಷ್ಟಸಾಧ್ಯ. ಗಂಗೂಲಿಯವರ ನಾಯಕತ್ವದ ಅಡಿಯಲ್ಲಿ ನಾನು ಆಟವಾಡಿದ್ದೇನೆ. ಅವರಿಂದ ಅತೀ ಹೆಚ್ಚು ಬೆಂಬಲ ದೊರಕಿತ್ತು. ಬಳಿಕ ಧೋನಿ ನಾಯಕರಾದರು. ಹಾಗಾಗಿ ಅವರಿಬ್ಬರ ಮಧ್ಯೆ ಅತ್ಯುತ್ತಮ ನಾಯಕರನ್ನು ಗುರ್ತಿಸುವುದು ಕಠಿಣ. ಆದರೂ ಗಂಗೂಲಿ ಕಪ್ತಾನಗಿರಿಯಲ್ಲಿ ನಾನು ಹೆಚ್ಚಿನ ನೆನಪುಗಲನ್ನು ಹೊಂದಿದ್ದೇನೆ. ದಾದಾ ನನಗೆ ಅತೀ ಹೆಚ್ಚು ಬೆಂಬಲ ನೀಡುತ್ತಿದ್ದರು. ಧೋನಿ ಅಥವಾ ಕೊಹ್ಲಿಯಿಂದ ಅಷ್ಟೊಂದು ಬೆಂಬಲ ಸಿಕ್ಕಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. 

ಇದೇ ವೇಳೆ ಕೊರೋನಾ ಲಾಕ್ ಡೌನ್ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, ಲಾಕ್ ಡೌನ್ ನಿಂದ ಅನುಕೂಲ ಹಾಗೂ ಅನಾನುಕೂಲ ಎರಡೂ ಇವೆ. ವಿಶ್ವದೆಲ್ಲೆಡೆ ವೈರಸ್ ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ನೋಡಿದರೆ ಬಹಳ ನೋವಾಗುತ್ತಿದೆ. ವೈರಸ್ ಅತೀ ವೇಗವಾಗಿ ಹರಡುತ್ತಿದೆ. ಜನರು ಭೀತಿಗೊಳಗಾಗುವ ಬದಲು ಸ್ಥಳೀಯ ಆರೋಗ್ಯಾಧಿಕಾರಿಗಳಿಂದ ಮಾಹಿತಿಗಳನ್ನು ಪಡೆದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ. 

ನನ್ನ ಆರೋಗ್ಯದಲ್ಲಿಯೇ ಈ ಹಿಂದೆ ಸಾಕಷ್ಟು ಏರುಪೇರುಗಳಾಗಿದ್ದವು. ಕ್ಯಾನ್ಸರ್ ಬಂದಾಗ ಆರಂಭದಲ್ಲಿ ನಾನು ಸಾಕಷ್ಟು ಹೆದರಿದ್ದೆ. ಬಳಿಕ ಆ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಂಡು ವೈದ್ಯರು ಹಾಗೂ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದುಕೊಂಡೆ. ಸರ್ಕಾರ ಹಾಗೂ ಆರೋಗ್ಯ ಸೈಟ್ ಗಳ ಮೂಲಕ ಮಾಹಿತಿ ಪಡೆದುಕೊಂಡು ವೈರಸ್ ಬಗ್ಗೆ ತಿಳಿದುಕೊಳ್ಳಿ. ಅಧಿಕಾರಿಗಳು ನಿಮಗೆ ಸರಿಯಾದ ಮಾಹಿತಿಗಳನ್ನು ನೀಡಬಲ್ಲರು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳು ಹರಡುವುದೇ ಹೆಚ್ಚು. ಜನರು ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳನ್ನು ಓದುವುದನ್ನು ನಿಲ್ಲಿಸಬೇಕು. ವದಂತಿಗಳಿಂದ ದೂರ ಉಳಿಯಬೇಕೆಂದು ತಿಳಿಸಿದ್ದಾರೆ. 

SCROLL FOR NEXT