ಕ್ರಿಕೆಟ್

ವಿಶ್ವಕಪ್ ಗೆಲುವಿಗೆ ಇಡೀ ತಂಡ ಕಾರಣ, ಧೋನಿಯ ಒಂದು ಸಿಕ್ಸ್ ಅಲ್ಲ: ಗೌತಮ್ ಗಂಭೀರ್

Lingaraj Badiger

ನವದೆಹಲಿ: ಈ ದಿನ 28 ವರ್ಷಗಳ ಬಳಿಕ ಟೀಂ ಇಂಡಿಯಾ ಎರಡನೇ ಬಾರಿ ವಿಶ್ವಕಪ್ ಗೆದ್ದ ಸುದಿನ. ಆದರೆ 2011ರಲ್ಲಿ ಭಾರತ ವಿಶ್ವಕಪ್ ಗೆಲ್ಲಲು ಮಹೇಂದ್ರ ಸಿಂಗ್ ಧೋನಿಯ ಒಂದು ಸಿಕ್ಸ್ ಕಾರಣ ಎಂದು ಸಂಭ್ರಮಿಸುತ್ತಿರುವವರನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಆರಂಭಿಕ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು, 9 ವರ್ಷಗಳ ಹಿಂದೆ ಭಾರತ ವಿಶ್ವಕಪ್ ಗೆಲ್ಲಲು ಇಡೀ ತಂಡ ಕಾರಣ. ಕೇವಲ ಒಂದು ಸಿಕ್ಸ್ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

2011, ಏಪ್ರಿಲ್ 2 ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಮಣಿಸಿದ್ದ ಭಾರತ ತಂಡವು 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಕಿರೀಟವನ್ನು ಎತ್ತಿ ಹಿಡಿದಿತ್ತು. ಕೊನೆಗೆ ನಾಯಕ ಮಹೇಂದ್ರ ಸಿಂಗ್ ಧೋನಿ ಸಿಕ್ಸರ್ ಬಾರಿಸುವ ಮೂಲಕ ಇಡೀ ಭಾರತೀಯರನ್ನು ಸಂತೋಷದ ಅಲೆಯಲ್ಲಿ ತೇಲಾಡುವಂತೆ ಮಾಡಿದ್ದರು.

ಇನ್ನು ಇಎಸ್‌ಪಿಎನ್ ಕ್ರಿಕ್‌ಇನ್ಫೋ, ಭಾರತದ ವಿಶ್ವಕಪ್ ಗೆಲುವಿನ ಒಂಬತ್ತು ವರ್ಷಗಳ ಸಂಭ್ರಮದ ಸಲುವಾಗಿ 'ಧೋನಿ ಸಿಕ್ಸರ್ ಹೊಡೆಯುವ ಚಿತ್ರದ ಸಮೇತವಾಗಿ ಲಕ್ಷಾಂತರ ಭಾರತೀಯರನ್ನು ಹರ್ಷೋಲ್ಲಾಸಕ್ಕೆ ಕಳುಹಿಸಿದ ಆ ಒಂದು ಶಾಟ್' ಎಂದು ಉಲ್ಲೇಖಿಸಿ ಟ್ವೀಟ್ ಮಾಡಿತ್ತು.

ಅಂದು ಫೈನಲ್ ಪಂದ್ಯದಲ್ಲಿ ಧೋನಿ ಜೊತೆ ನಿರ್ಣಾಯಕ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಗೌತಮ್ ಗಂಭೀರ್ ಇದರಿಂದ ಆಕ್ರೋಶಗೊಂಡಿದ್ದು, ಇಡೀ ಭಾರತ 2011ರ ವಿಶ್ವಕಪ್ ಗೆದ್ದಿದೆ. ಈ ಗೆಲುವಿಗೆ ಇಡೀ ತಂಡ ಹಾಗೂ ಸಿಬ್ಬಂದಿ ಕಾರಣ. ಒಂದು ಸಿಕ್ಸರ್ ಕಾರಣ ಎಂಬ ನಿಮ್ಮ ಭ್ರಾಂತಿ ಹೋಗಲಾಡಿಸಲು ಇದು ಸಕಾಲ' ಎಂದು ಛೇಡಿಸಿದ್ದಾರೆ.

SCROLL FOR NEXT