ಕ್ರಿಕೆಟ್

ಕೊರೋನಾಗೆ ಸೆಡ್ಡು, ನಿಗದಿಪಡಿಸಿದ ದಿನಾಂಕದಂತೆ ನಡೆಯಲಿದೆ ಟಿ20 ವಿಶ್ವಕಪ್‌: ಐಸಿಸಿ ಸ್ಪಷ್ಟನೆ

Vishwanath S

ದುಬೈ: ಇದೇ ವರ್ಷ ಅಕ್ಟೋಬರ್‌ನಲ್ಲಿ ನಿಗದಿಪಡಿಸಿರುವಂತೆ 2020ರ ಐಸಿಸಿ ಟಿ20 ವಿಶ್ವಕಪ್‌ ಜರುಗಲಿದ್ದು, ಯಾವುದೇ ಬದಲಾವಣೆ ಇಲ್ಲವೆಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಸ್ಪಷ್ಟಪಡಿಸಿದೆ. 

ಕೊರೊನಾ ವೈರಸ್‌ನಿಂದ ಜಾಗತಿಕ ಎಲ್ಲ ಸ್ವರೂಪದ ಕ್ರೀಡಾಚಟುವಟಿಕೆಗಳು ಸ್ಥಗಿತಗೊಂಡಿವೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸೇರಿದಂತೆ ಅಂತಾರಾಷ್ಟ್ರೀಯ ಹಲವು ಟೂರ್ನಿಗಳು ಹಾಗೂ ಸರಣಿಗಳು ಈಗಾಗಲೇ ರದ್ದಾಗಿವೆ. ಇದರ ನಡುವೆ ಎಲ್ಲ ದೇಶಗಳು ಮಾರಣಾಂತಿಕ ವೈರಸ್‌ ವಿರುದ್ಧ ಹೋರಾಟ ನಡೆಸುತ್ತಿವೆ.

ಇದೇ ವರ್ಷ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ವೇಳಾಪಟ್ಟಿಯ ಮೇಲೂ ಕೊರೊನಾ ವೈರಸ್‌ ಪರಿಣಾಮ ಬೀರಬಹುದು ಎಂದು ಹೇಳಲಾಗಿತ್ತು. ಹಾಗಾಗಿ, 2020ರ ಚುಟುಕು ವಿಶ್ವಕಪ್‌ 2022ಕ್ಕೆ ಮುಂದೂಡಬಹುದು ಎಂದು ಎಲ್ಲೆಡೆ ವದಂತಿಗಳು ಎದ್ದಿದ್ದವು. ಆದರೆ, ಇದೀಗ ಐಸಿಸಿ ಎಲ್ಲ ವದಂತಿಗಳಿಗೂ ತೆರೆ ಎಳೆದಿದೆ. 

"ಪ್ರಸ್ತುತ ಕೋವಿಡ್‌-19 ಸೋಂಕು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಇಡೀ ವಿಶ್ವವೇ ಮುಂದಾಗಿದೆ. ಐಸಿಸಿ ಟಿ 20 ವಿಶ್ವಕಪ್ 2020 ಸ್ಥಳೀಯ ಸಂಘಟನಾ ಸಮಿತಿಯು ಸದ್ಯದ ಪರಿಸ್ಥಿತಿಯನ್ನು ಸಂಬಂಧಿತ ಅಧಿಕಾರಿಗಳೊಂದಿಗೆ ನಿಕಟವಾಗಿ ಪರಿಶೀಲಿಸುತ್ತಿದೆ ಮತ್ತು ಹಾಗಾಗಿ ಟೂರ್ನಿ ಮುಂದುವರಿಯಲಿದೆ," ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"ಐಸಿಸಿ ಪುರುಷರ ಟಿ 20 ವಿಶ್ವಕಪ್ 2020 ರ ಅಕ್ಟೋಬರ್ 18 ರಿಂದ 15 ನವೆಂಬರ್ 2020 ರವರೆಗೆ ಆಸ್ಟ್ರೇಲಿಯಾದ ಏಳು ಸ್ಥಳಗಳಲ್ಲಿ ನಡೆಯಲಿದೆ. ಚುಟುಕು ಟೂರ್ನಿಯನ್ನು ನಿಗದಿಯಂತೆ ಮುಂದುವರಿಯಲು ನಾವು ಯೋಜಿಸುತ್ತಿದ್ದೇವೆ,"ಎಂದು ಐಸಿಸಿ ಹೇಳಿದೆ.

SCROLL FOR NEXT