ಕ್ರಿಕೆಟ್

ಆರಂಭಕ್ಕೂ ಮುನ್ನವೇ ಐಪಿಎಲ್ ಗೆ ಕೊರೋನಾ ಶಾಕ್: ರಾಜಸ್ಥಾನ ರಾಯಲ್ಸ್ ತಂಡದ ಫೀಲ್ಡಿಂಗ್ ಕೋಚ್ ಗೆ ಸೋಂಕು!

Srinivasamurthy VN

ಜೈಪುರ: ಐಪಿಎಲ್ 2020 ಟೂರ್ನಿ ಆರಂಭಕ್ಕೂ ಮುನ್ನವೇ ಕೊರೋನಾ ವೈರಸ್ ಶಾಕ್ ನೀಡಿದ್ದು, ರಾಜಸ್ಥಾನ ರಾಯಲ್ಸ್ ತಂಡದ ಫೀಲ್ಡಿಂಗ್ ಕೋಚ್ ಗೆ ಸೋಂಕು ಒಕ್ಕರಿಸಿದೆ.

ಈ ಬಗ್ಗೆ ಸ್ವತಃ ರಾಜಸ್ಥಾನ ರಾಯಲ್ಸ್ ತಂಡ ಫ್ರಾಂಚೈಸಿಗಳು ಮತ್ತು ಫೀಲ್ಡಿಂಗ್ ಕೋಚ್ ದಿಶಾಂತ್ ಯಾಗ್ನಿಕ್‌ ಮಾಹಿತಿ ಹಂಚಿಕೊಂಡಿದ್ದು, ಕೋವಿಡ್-19ಪಾಸಿಟಿವ್ ವರದಿ ಬಂದಿದೆ ಎಂದು ಹೇಳಿದೆ. ಅಲ್ಲದೆ ರಾಜಸ್ಥಾನ ರಾಯಲ್ಸ್ ತಂಡದ ಫ್ರಾಂಚೈಸಿಗಳು ದಿಶಾಂತ್ ತಮ್ಮ ಊರಿನಲ್ಲೇ ಈ ಸಂದರ್ಭದಲ್ಲಿ ಇದ್ದು, ತಂಡದ ಯಾವುದೇ ಇತರ ಆಟಗಾರರು ದಿಶಾಂತ್ ಜೊತೆಗೆ ಸಾಮಿಪ್ಯವನ್ನು ಕಾಯ್ದುಕೊಂಡಿರಲಿಲ್ಲ ಎಂದು ಖಚಿತಪಡಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ದಿಶಾಂತ್ ಅವರು, ನಾನು ಕೊರೋನಾ ಸೋಂಕಿಗೆ ತುತ್ತಾಗಿದ್ದು, ಕಳೆದ 10 ದಿನಗಳಲ್ಲಿ ನನ್ನನ್ನು ಸಂಪರ್ಕಿಸಿದ್ದವರು ದಯಮಾಡಿ ಕೋವಿಡ್-19 ಪರೀಕ್ಷೆಗೊಳಪಡಿಸಿಕೊಳ್ಳಿ. ಬಿಸಿಸಿಐನ ಮಾರ್ಗದರ್ಶಿ ನಿಯಮದಂತೆ ನಾನು ಮುಂದಿನ 14 ದಿನ ಕ್ವಾರಂಟೈನ್ ನಲ್ಲಿರಲಿದ್ದು, ತಂಡ ಸೇರ್ಪಡೆಗೂ ಮುನ್ನ 2 ಬಾರಿ ಪರೀಕ್ಷೆಗೊಳಪಡಿಸಿಕೊಳ್ಳಲಿದ್ದೇನೆ. ಎರಡರಲ್ಲೂ ನೆಗೆಟಿವ್ ಬಂದರೆ ತಂಡ ಸೇರಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಮೂಲಗಳ ಪ್ರಕಾರ ಪ್ರಸ್ತುತ ದಿಶಾಂತ್ ಸದ್ಯ ತಮ್ಮ ಉದಯಪುರದ ನಿವಾಸದಲ್ಲಿದ್ದಾರೆ. ಹೀಗಾಗಿ ಅವರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಲು ಸೂಚಿಸಲಾಗಿದೆ. 14 ದಿನಗಳ ಕ್ವಾರಂಟೈನ್‌ಗಾಗಿ ಪೂರೈಸಿ ಬಳಿಕ ನೆಗೆಟಿವ್ ವರದಿಯೊಂದಿಗೆ ತಂಡವನ್ನು ಸೇರಿಕೊಳ್ಳುವ ಅವಕಾಶವಿದೆ. 

ಈ ವರ್ಷದ ಐಪಿಎಲ್‌ನಲ್ಲಿ ಆಡಲು ಯುಎಇಗೆ ತೆರಳಲು ಮುಂಬೈನಲ್ಲಿ ಮುಂದಿನ ವಾರ ಇಡೀ ತಂಡ ಒಟ್ಟಾಗುವ ಮೊದಲು ತಂಡದ ಸದಸ್ಯರಿಗೆ ಕೋವಿಡ್ ಟೆಸ್ಟ್ ನಡೆಸಲು ನಿರ್ಧರಿಸಲಾಗಿತ್ತು. ಫ್ರಾಂಚೈಸಿಯು ತನ್ನೆಲ್ಲ ಆಟಗಾರರು, ಸಹಾಯಕ ಸಿಬ್ಬಂದಿ ಹಾಗೂ ಆಡಳಿತಕ್ಕೆ ಯುಎಇಗೆ ತೆರಳುವ ಮೊದಲು ಬಿಸಿಸಿಐ ಶಿಫಾರಸಿನಂತೆ ಎರಡು ಹೆಚ್ಚುವರಿ ಪರೀಕ್ಷೆ ನಡೆಸಿದೆ.

SCROLL FOR NEXT