ಕ್ರಿಕೆಟ್

ಸಿಕ್ಸ್‌ ಬಾರಿಸಿ ತಮ್ಮದೇ ಕಾರಿನ ಗ್ಲಾಸ್‌ ಒಡೆದು ಹಾಕಿದ ಐರ್ಲೆಂಡ್ ಕ್ರಿಕೆಟಿಗ ಕೆವಿನ್‌ ಓಬ್ರಿಯನ್‌

Vishwanath S

ನವದೆಹಲಿ: ಐರ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ ಕೆವಿನ್‌ ಓಬ್ರಿಯನ್‌ ಸಿಕ್ಸರ್‌ ಸಿಡಿಸುವುದರಲ್ಲಿ ಎಂದಿಗೂ ಹಿಂದೆ ಬಿದ್ದವರಲ್ಲ. ಹಲವು ಬಾರಿ ತಮ್ಮ ಸ್ಫೋಟಕ ಬ್ಯಾಟಿಂಗ್‌ನಲ್ಲಿ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಆದರೆ, ಪಂದ್ಯವೊಂದರಲ್ಲಿ ಸಿಡಿಸಿದ  ಸಿಕ್ಸರ್‌ನಿಂದ ಚೆಂಡು ತಮ್ಮದೇ ಕಾರಿನ ಗಾಜು ಹೊಡೆದಿದ್ದರಿಂದ ಅವರು ಬೇಸರವಾಗಿದ್ದಾರೆ.

2011ರಲ್ಲಿ ಕೆವಿನ್‌ ಓಬ್ರಿಯನ್‌ ಐಸಿಸಿ ಏಕದಿನ ವಿಶ್ವಕಪ್‌ ಇತಿಹಾಸದಲ್ಲೇ ಅತಿ ವೇಗದ ಶತಕ ಸಿಡಿಸಿ ದಾಖಲೆ ಮಾಡಿದ್ದರು. ಆ ಮೂಲಕ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ನೀಡಿದ್ದ 327 ರನ್‌ ಗುರಿಯನ್ನು ಐರ್ಲೆಂಡ್‌ ಯಶಸ್ವಿಯಾಗಿ ಮುಟ್ಟುವಲ್ಲಿ ಓಬ್ರಿಯನ್‌  ನೆರವಾಗಿದ್ದರು. ಇದೀಗ ಇಂಟರ್‌-ಪ್ರೊವಿನ್ಸಿಯಲ್ ಟಿ20 ಟ್ರೋಫಿ ಟೂರ್ನಿಯಲ್ಲಿ ಲೀನ್‌ಸ್ಟರ್‌ ಲೈಟ್ನಿಂಗ್‌ ಪರ ಅವರು 37 ಎಸೆತಗಳಲ್ಲಿ 82 ರನ್‌ಗಳನ್ನು ಸಿಡಿಸಿದ್ದರು.

ತಮ್ಮ ವೈಯಕ್ತಿಕ ಮೊತ್ತದಲ್ಲಿ 8 ಸಿಕ್ಸರ್‌ಗಳು ಒಳಗೊಂಡಿದ್ದವು. ಇವುಗಳಲ್ಲಿ ಒಂದು ಸಿಕ್ಸರ್‌ ಮಾತ್ರ ದಬ್ಲಿನ್‌ನಲ್ಲಿರುವ ಪೆಮ್‌ಬ್ರೋಕ್‌ ಕ್ರಿಕೆಟ್‌ ಕ್ಲಬ್‌ ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿದ ತಮ್ಮದೇ ಕಾರಿನ ಹಿಂಭಾಗಕ್ಕೆ ಚೆಂಡು ತಾಗಿತ್ತು, ಇದರಿಂದ ಗ್ಲಾಸ್‌ ಪುಡಿ-ಪುಡಿಯಾಗಿತ್ತು. ಪಂದ್ಯದ ಬಳಿಕ ಕೆವಿನ್‌ ಓಬ್ರಿಯನ್‌ ನೇರವಾಗಿ ಕಾರ್‌ ಗ್ಯಾರೇಜ್‌ಗೆ ತೆರಳಿ ಗ್ಲಾಸ್‌ ಅನ್ನು ಬದಲಾಯಿಸಿಕೊಂಡರು.

ಚಿಂತಿಸಿಬೇಡಿ ಕೆವಿನ್‌ ಓಬ್ರಿಯನ್‌ ನಿಮ್ಮ ಕಾರಿಗೆ ಹೊಸ ಗ್ಲಾಸ್‌ ಹಾಕಿಕೊಡುತ್ತೇವೆ ಎಂದು ಟೊಯೋಟಾ ಡೀಲರ್‌ಶಿಪ್‌ ಟ್ವಿಟರ್‌ನಲ್ಲಿ ಐರ್ಲೆಂಡ್‌ ಬ್ಯಾಟ್ಸ್‌ಮನ್‌ಗೆ ಸಮಾಧಾನ ಮಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆವಿನ್ ಓಬ್ರಿಯನ್ ಇನ್ನು ಮುಂದೆ ತಮ್ಮ ಕಾರನ್ನು ಬೇರೆ ಕಡೆ ನಿಲ್ಲಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಐರ್ಲೆಂಡ್‌ ತಂಡ ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧ ಮೂರು ಪಂದ್ಯಗಳ ಏಕದಿನ ಪಂದ್ಯವನ್ನು 1-2 ಅಂತರದಲ್ಲಿ ಸೋಲು ಅನುಭವಿಸಿತ್ತು. ಆದರೆ, ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಏಳು ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಐರ್ಲೆಂಡ್‌, ಇಂಗ್ಲೆಂಡ್‌ ನೆಲದಲ್ಲಿ ಅತಿ ಹೆಚ್ಚು ಮೊತ್ತ ಬೆನ್ನತ್ತಿದ್ದ ವಿಶ್ವದ ಮೊದಲ ತಂಡ ಎಂಬ ದಾಖಲೆಗೆ ಭಾಜನವಾಗಿತ್ತು. ಆ ಮೂಲಕ 2002ರಲ್ಲಿ ನಾಟ್‌ವೆಸ್ಟ್ ಟ್ರೋಫಿ ಫೈನಲ್‌ ಹಣಾಹಣಿಯಲ್ಲಿ ಭಾರತ ಗುರಿ ಬೆನ್ನತ್ತಿದ್ದ ದಾಖಲೆಯನ್ನು ಐರ್ಲೆಂಡ್ ಮುರಿಯಿತು.

SCROLL FOR NEXT