ಕ್ರಿಕೆಟ್

ಸ್ಟಂಪಿಂಗ್ ಮಿಸ್: 'ನಾನು ಎಂಎಸ್‌ ಧೋನಿಯಲ್ಲ', ತನಗೆ ತಾನೇ ಕಾಲೆಳೆದುಕೊಂಡ ಮ್ಯಾಥ್‌ ವೇಡ್‌, ವಿಡಿಯೋ ವೈರಲ್

Vishwanath S

ಸಿಡ್ನಿ: ಎಂಎಸ್‌ ಧೋನಿಗೆ ಧೋನಿಯೇ ಸರಿಸಾಟಿ. ಅವರ ವಿಕೆಟ್‌ ಕೀಪಿಂಗ್‌ ಚಾಕಚಕ್ಯತೆಯನ್ನು ಬೇರೆ ಯಾರಿಂದಲೂ ಕಾಪಿ ಹೊಡೆಯಲು ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ಆಸ್ಟ್ರೇಲಿಯಾ ತಂಡದ ವಿಕೆಟ್‌ ಕೀಪರ್‌ ಮ್ಯಾಥ್ಯೂ ವೇಡ್‌ ಮಿಂಚಿನ ಸ್ಟಂಪಿಂಗ್‌ ಮಾಡುವ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ (ಎಸ್‌ಸಿಜಿ) ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೈವೋಲ್ಟೇಜ್‌ ಟಿ20 ಪಂದ್ಯದಲ್ಲಿ ಈ ಘಟನೆ ನಡೆಯಿತು. 195 ರನ್‌ಗಳ ಅಸಾಧ್ಯದ ಗುರಿ ಬೆನ್ನತ್ತಿದ್ದ ಟೀಮ್‌ ಇಂಡಿಯಾಗೆ ಓಪನ್‌ ಶಿಖರ್‌ ಧವನ್‌ ಭರ್ಜರಿ ಆರಂಭ ಕೊಟ್ಟಿದ್ದರು. 9ನೇ ಓವರ್‌ನಲ್ಲಿ ಶಿಖರ್‌, ಲೆಗ್‌ ಸ್ಪಿನ್ನರ್‌ ಮೈಕಲ್‌ ಸ್ವೆಪ್ಸನ್‌ ಬೌಲಿಂಗ್‌ನಲ್ಲಿ ಸ್ಟಂಪ್‌ಔಟ್‌ ಆಗುವ ಸಾಧ್ಯತೆ ಇತ್ತು. ಆದರೆ ಕೂದಲೆಳೆ ಅಂತರದಲ್ಲಿ ಪಾರಾದರು.

ಆ ಹೊತ್ತಿಗೆ 39 ರನ್‌ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಧವನ್‌, ಲೆಗ್‌ ಸ್ಪಿನ್ನರ್‌ ಎಸೆದ ರಾಂಗ್‌ ಒನ್‌ ಎಸೆತವನ್ನು ಆಡದೆ ಬಿಟ್ಟರು. ಅಂಪೈರ್‌ ವೈಡ್‌ ನೀಡಲಿಲ್ಲ ಎಂಬ ನಿರಾಸೆಯಲ್ಲಿ ಮೈಮೆರೆತ ಶಿಖರ್‌ ಕ್ರೀಸ್‌ನಿಂದ ಕೊಂಚ ಕಾಲೆನ್ನು ಮೇಲೆತ್ತಿದ್ದರು. ಈ ಅವಕಾಶ ಬಳಸಿಕೊಂಡ ವೇಡ್‌ ಬೇಲ್ಸ್‌ ಹಾರಿಸಿ ಸ್ಟಂಪಿಂಗ್‌ ಸಲುವಾಗಿ ಮನವಿ ಮಾಡಿದ್ದರು.

ಬಳಿಕ 3ನೇ ಅಂಪೈರ್‌ ತಮ್ಮ ನಿರ್ಧಾರ ನೀಡಲು ವಿಡಿಯೋ ರೀ-ಪ್ಲೇ ವೀಕ್ಷಿಸಿದಾಗ ಧವನ್‌ ಕಾಲೆತ್ತಿರುವುದು ಕಂಡುಬಂದಿತು. ಆದರೆ, ವೇಡ್‌ ಬೇಲ್ಸ್‌ ಹಾರಿಸುವ ಹೊತ್ತಿಗೆ ಮಿಂಚಿನ ವೇಗದಲ್ಲಿ ತಮ್ಮ ಕಾಲನ್ನು ನೆಲಕ್ಕಿಟ್ಟಿದ್ದರು. ಇದನ್ನು ಕಂಡು ಬೇಸರಗೊಂಡ ವೇಡ್‌ "ಎಂಎಸ್‌ ಧೋನಿಯಷ್ಟು ವೇಗ ಇಲ್ಲ ಎಂದು ಶಿಖರ್‌ ಧವನ್‌ ಬಳಿ ಹೇಳಿ ನಕ್ಕಿದ್ದು ಸ್ಟಂಪ್‌ ಮೈಕ್‌ನಲ್ಲಿ ಸೆರೆಯಾಗಿದೆ. ಈ ಮೂಲಕ ಸ್ಟಂಪಿಂಗ್‌ ಮಾಡುವಾಗ ಧೋನಿಯಷ್ಟು ವೇಗವಿಲ್ಲ ಎಂದು ತಮಗೆ ತಾವೇ ವೇಡ್ ಟ್ರೋಲ್‌ ಮಾಡಿಕೊಂಡಿದ್ದಾರೆ.

ಧವನ್‌, ತಮಗೆ ಸಿಕ್ಕ ಈ ಜೀವದಾನದ ಸಂಪೂರ್ಣ ಲಾಭ ಪಡೆದು ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಮ್ಮ ಮೊದಲ ಅರ್ಧಶತಕ ಬಾರಿಸಿದರು. ಏಕದಿನ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಶಿಖರ್‌ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 1 ರನ್‌ ಗಳಿಸಿ ಮಿಚೆಲ್‌ ಸ್ಟಾರ್ಕ್‌ ಎದುರು ಕ್ಲೀನ್‌ ಬೌಲ್ಡ್‌ ಆಗಿದ್ದರು. ಆದರೆ, ಸಿಡ್ನಿ ಕ್ರೀಡಾಂಗಣದಲ್ಲಿ ಗರ್ಜಿಸಿದ ಗಬ್ಬರ್‌, ಕೇವಲ 36 ಎಸೆತಗಳಲ್ಲಿ 4 ಫೋರ್‌ ಮತ್ತು 2 ಸಿಕ್ಸರ್‌ಗಳೊಂದಿಗೆ 52 ರನ್‌ ಚೆಚ್ಚಿ ತಂಡಕ್ಕೆ ದೊಡ್ಡ ಮೊತ್ತದ ರನ್‌ಚೇಸ್‌ಗೆ ಬೇಕಿದ್ದ ಭದ್ರ ಅಡಿಪಾಯ ಹಾಕಿಕೊಟ್ಟರು.

SCROLL FOR NEXT