ಕ್ರಿಕೆಟ್

'ಉದ್ದೇಶಪೂರ್ವಕವಾಗಿ ಹೋಗಿರಲಿಲ್ಲ, ಬಂಧನ ದುರದೃಷ್ಟಕರ ಘಟನೆ': ಸುರೇಶ್ ರೈನಾ ಹೇಳಿಕೆ

Srinivasamurthy VN

ಮುಂಬೈ: ಮಾರಕ ಕೊರೋನಾ ವೈರಸ್ ಮಾರ್ಗಸೂಚಿ ಜಾರಿಯ ನಡುವೆಯೇ ಮುಂಬೈನಲ್ಲಿ ಕ್ಲಬ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಆರೋಪದ ಮೇಲೆ ಬಂಧನಕ್ಕೀಡಾಗಿರುವ ಕ್ರಿಕೆಟಿಗ ಸುರೇಶ್ ರೈನಾ ಘಟನೆ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮುಂಬೈನ ಕ್ಲಬ್‌ವೊಂದರಲ್ಲಿ ಕೋವಿಡ್-19 ಸಾಂಕ್ರಾಮಿಕ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮುಂಬೈ ಪೊಲೀಸರು ಕ್ಲಬ್ ಮೇಲೆ ದಾಳಿ ನಡೆಸಿದ್ದರು. ಮುಂಬೈ ಏರ್ಪೋರ್ಟ್ ಸಮೀಪದ ಖಾಸಗೀ ಕ್ಲಬ್‌ವೊಂದರಲ್ಲಿ ಮುಂಜಾನೆ 3 ಗಂಟೆಯ ಸುಮಾರಿಗೆ ಪೊಲೀಸ್ ದಾಳಿ ನಡೆದಿತ್ತು. ಈ  ವೇಳೆ ಕ್ಲಬ್ ನಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸೇನ್, ಗಾಯಕ ಗುರು ರಾಂಧವ, ಕ್ರಿಕೆಟಿಗ ಸುರೇಶ್ ರೈನಾ ಸೇರಿದಂತೆ 34 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. 

ಮುಂಬೈನ ನೈಟ್‌ ಕ್ಲಬ್‌ವೊಂದರಲ್ಲಿ ಭಾಗಿಯಾಗಿದ್ದ ಟೀಮ್ ಇಂಡಿಯಾ ಆಟಗಾರ ಕೊರೊನಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಬಂಧನಕ್ಕೆ ಒಳಪಟ್ಟಿದ್ದರು. ಬಳಿಕ ಜಾಮೀನಿನ ಮೂಲಕ ಅವರು ಬಿಡುಗಡೆಯಾಗಿದ್ದಾರೆ. ಈ ಘಟನೆ ದೊಡ್ಡ ಸದ್ದಾಗುತ್ತಿದ್ದಂತೆ ಮಾಜಿ  ಕ್ರಿಕೆಟಿಗ ಸುರೇಶ್ ರೈನಾ ಅವರ ಮ್ಯಾನೇಜ್‌ಮೆಂಟ್ ಘಟನೆಯ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ. 

"ಸುರೇಶ್ ರೈನಾ ಚಿತ್ರೀಕರಣದ ಹಿನ್ನೆಲೆಯಲ್ಲಿ ಮುಂಬೈಗೆ ತೆರಳಿದ್ದು ಅದು ನಿಗದಿಗಿಂತ ತಡವಾಗಿ ಮುಗಿದಿತ್ತು. ಬಳಿಕ ದೆಹಲಿಗೆ ವಿಮಾನದಲ್ಲಿ ವಾಪಾಸಾಗುವ ಮುನ್ನ ಸ್ನೇಹಿತರೊಬ್ಬರು ಭೋಜನಕ್ಕಾಗಿ ಆಹ್ವಾನಿಸಿದ್ದರು. ಆದರೆ ಮುಂಬೈನ ಸ್ಥಳೀಯ ಕೊರೊನಾ ನೀತಿಸಂಹಿತೆ ಹಾಗೂ  ಸಮಯದ ಬಗ್ಗೆ ರೈನಾ ಅವರಿಗೆ ಅರಿವಿರಲಿಲ್ಲ. ಈ ವಿಚಾರ ಸುರೇಶ್ ರೈನಾ ಅವರ ಅರಿವಿಗೆ ಬಂದ ಕೂಡಲೇ ಅಧಿಕಾರಿಗಳ ಕಾರ್ಯವಿಧಾನಗಳಿಗೆ ಸಹಕಾರವನ್ನು ನೀಡಿದ್ದಾರೆ. ಈ ಉದ್ಧೇಶಪೂರ್ವಕವಲ್ಲದ ಹಾಗೂ ದುರದೃಷ್ಟಕರ ಘಟನೆಗೆ ರೈನಾ ಬೇಸರ ವ್ಯಕ್ತಪಡಿಸಿದ್ದಾರೆ. ರೈನಾ  ಯಾವಾಗಲೂ ಸರ್ಕಾರ ನಿಗದಿಪಡಿಸಿದ ನಿಯಮಗಳು ಮತ್ತು ಕಾನೂನುಗಳ ಬಗ್ಗೆ ಅತ್ಯುನ್ನತ ಗೌರವ ಹೊಂದಿದ್ದಾರೆ. ಭವಿಷ್ಯದಲ್ಲಿಯೂ ಸಹ ಅದನ್ನು ಮುಂದುವರಿಸುತ್ತಾರೆ' ಎಂದು ಈ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. 

SCROLL FOR NEXT