ಕ್ರಿಕೆಟ್

2022ರಿಂದ ಐಪಿಎಲ್‌ನಲ್ಲಿ 10 ತಂಡ: ಬಿಸಿಸಿಐ ಅನುಮೋದನೆ

Lingaraj Badiger

ನವದೆಹಲಿ: 2022ನೇ ಸಾಲಿನ ಐಪಿಎಲ್‌ನಲ್ಲಿ 10 ತಂಡಗಳನ್ನು ಸೇರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗುರುವಾರ ಅನುಮೋದನೆ ನೀಡಿದೆ.
 
ಇಂದು ಅಹಮದಾಬಾದ್‌ನಲ್ಲಿ ನಡೆದ 89ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 2022ರಲ್ಲಿ ಐಪಿಎಲ್ ತಂಡಗಳ ಸಂಖ್ಯೆಯನ್ನು 10ಕ್ಕೆ ಹೆಚ್ಚಿಸಲು ಬಿಸಿಸಿಐ ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ಈ ಬಗ್ಗೆ ಕೆಲಸ ಮಾಡಲು ಐಪಿಎಲ್ ಆಡಳಿತ ಮಂಡಳಿಗೆ ಸೂಚಿಸಲಾಗಿದೆ.
 
ಐಪಿಎಲ್‌ನಲ್ಲಿ ಪ್ರಸ್ತುತ ಎಂಟು ತಂಡಗಳು ಭಾಗವಹಿಸುತ್ತಿದ್ದು, ಇದರಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಕೋಲ್ಕತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿವೆ.
 
ಐಪಿಎಲ್‌ನ 2020ನೇ ಆವೃತ್ತಿಯು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಲ್ಲಿ ಸೆಪ್ಟೆಂಬರ್‌ನಿಂದ ನವೆಂಬರ್ ವರೆಗೆ ನಡೆದಿತ್ತು. ಇದರಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು ಮತ್ತು ಮುಂಬೈ ಇಂಡಿಯನ್ಸ್ ಐದನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 
 
ಎಜಿಎಂನ ಕಾರ್ಯಸೂಚಿಯಲ್ಲಿ ಪ್ರಮುಖ ವಿಷಯವೆಂದರೆ ಎರಡು ಹೊಸ ಐಪಿಎಲ್ ತಂಡಗಳನ್ನು ಸೇರಿಸುವುದು ಎಂದು ಬಿಸಿಸಿಐ ಡಿಸೆಂಬರ್ ಆರಂಭದಲ್ಲಿ ತನ್ನ ರಾಜ್ಯ ಸಂಘಗಳಿಗೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜೈ ಶಾ ಮತ್ತು ಖಜಾಂಚಿ ಅರುಣ್ ಧುಮಾಲ್ ಮತ್ತು ಐಪಿಎಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿಮಾಂಗ್ ಅಮೀನ್ ಅವರು ಚರ್ಚೆ ನಡೆಸಿದ್ದರು.
 
2021ರ ಐಪಿಎಲ್ ಪ್ರಾರಂಭವಾಗುವ ನಾಲ್ಕು ತಿಂಗಳುಗಳ ಮೊದಲು ಈ ತೀರ್ಮಾನ ಕೈಗೊಳ್ಳಲಾಗಿದೆ.

SCROLL FOR NEXT