ಕ್ರಿಕೆಟ್

ಸತತ ಮೂರನೇ ವರ್ಷವೂ ವಿರಾಟ್ ಕೊಹ್ಲಿ ಭಾರತದ ಅಗ್ರ ಸೆಲೆಬ್ರಿಟಿ

Lingaraj Badiger

ನವದೆಹಲಿ: ವಿಶ್ವ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಲವು ಯುವ ಕ್ರಿಕೆಟಿಗರಿಗೆ ಮಾದರಿಯಾಗಿದ್ದಾರೆ. ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ಭಾರತದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಯಾಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ.
 
ಜಾಗತಿಕ ಸಲಹಾ ಸಂಸ್ಥೆ ಡಫ್ ಮತ್ತು ಫೆಲ್ಪ್ಸ್ ನಡೆಸಿದ ಅಧ್ಯಯನದ ಪ್ರಕಾರ, ಸತತ ಮೂರನೇ ವರ್ಷವೂ ಕೊಹ್ಲಿ ಬ್ರ್ಯಾಂಡ್ ಮೌಲ್ಯಮಾಪನ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಅವರ ಮೌಲ್ಯವು ಶೇಕಡಾ 39 ರಷ್ಟು ಏರಿಕೆಯಾಗಿದೆ. 2019 ರಲ್ಲಿ 237.5 ದಶಲಕ್ಷ ಡಾಲರ್‌ಗೆ ತಲುಪಿದೆ.

31ರ ಪ್ರಾಯದ ಭಾರತ ತಂಡದ ನಾಯಕ ಬಾಲಿವುಡ್ ತಾರೆಗಳಾದ ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮತ್ತು ಶಾರುಖ್ ಖಾನ್ ಅವರಿಗಿಂತ ಮುಂದಿದ್ದಾರೆ.

105.5 ದಶಲಕ್ಷ ಡಾಲರ್ ಮೌಲ್ಯದ ಬ್ರ್ಯಾಂಡ್ ಅನುಮೋದನೆಗಳೊಂದಿಗೆ ಅಕ್ಷಯ್ ಕುಮಾರ್ ಎರಡನೇ ಸ್ಥಾನದಲ್ಲಿದ್ದು, ಶೇಕಡಾ 55.3 ರಷ್ಟು ಬೆಳವಣಿಗೆಯಾಗಿದೆ.

ಖ್ಯಾತ ಬಾಲಿವುಡ್ ದಂಪತಿ ರಣವೀರ್ ಸಿಂಗ್ ಮತ್ತು ದೀಪಿಕಾ ತಲಾ 93.5 ದಶಲಕ್ಷ ಬ್ರ್ಯಾಂಡ್ ಮೌಲ್ಯದೊಂದಿಗೆ ಮೂರನೇ ಸ್ಥಾನ ಪಡೆದರು. ದೀಪಿಕಾ ಸತತ ಎರಡನೇ ವರ್ಷವೂ ತನ್ನ ಅತ್ಯಮೂಲ್ಯ ಮಹಿಳಾ ಸೆಲೆಬ್ರಿಟಿ ಸ್ಥಾನಮಾನವನ್ನು ಉಳಿಸಿಕೊಂಡಿದ್ದರೆ. ರಣವೀರ್ ಒಂದು ಸ್ಥಾನಕ್ಕೆ ಏರಿದ್ದಾರೆ.

ಪಟ್ಟಿಯಲ್ಲಿರುವ ಇತರ ಕ್ರೀಡಾಪಟುಗಳಾದ ಎಂ.ಎಸ್.ಧೋನಿ  41.2 ದಶಲಕ್ಷ ಡಾಲರ್ ಮೌಲ್ಯದೊಂದಿಗೆ 9ನೇ ಸ್ಥಾನ, ಸಚಿನ್ ತೆಂಡೂಲ್ಕರ್ 15 ನೇ ಸ್ಥಾನ ಮತ್ತು ರೋಹಿತ್ ಶರ್ಮಾ 20 ನೇ ಸ್ಥಾನದಲ್ಲಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ಐದು ಪಂದ್ಯಗಳ ಟಿ-20 ಸರಣಿಯನ್ನು ಭಾರತ 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಬುಧವಾರ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ನಾಲ್ಕು ವಿಕೆಟ್ ಗಳ ಸೋಲು ಅನುಭವಿಸಿದೆ.

SCROLL FOR NEXT