ಕ್ರಿಕೆಟ್

ಅಪಘಾತ: ಕೊದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ವಿಂಡೀಸ್ ವೇಗಿ ಪಾರು

Lingaraj Badiger

ನವದೆಹಲಿ: ವೆಸ್ಟ್‌ ಇಂಡೀಸ್ ತಂಡದ ಯುವ ವೇಗಿ ಒಶೇನ್ ಥಾಮಸ್ ರಸ್ತೆ ಅಪಘಾತವೊಂದರಲ್ಲಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಜಮೈಕಾದ ಸೇಂಟ್ ಕ್ಯಾಥರೀನ್ 2000ರ ಹೆದ್ದಾರಿಯಲ್ಲಿ ಒಶೇನ್ ತಮ್ಮ ಆಡಿ ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದೆ. ಕಾರ್‌ನಲ್ಲಿದ್ದ ಏರ್ ಬ್ಯಾಗ್ಸ್‌ ಮತ್ತು ರಕ್ಷಣಾ ಸವಲತ್ತುಗಳು ಒಶೇನ್ ಪ್ರಾಣವನ್ನು ಉಳಿಸಿದೆ ಎನ್ನಲಾಗಿದೆ. ಹಾಗಾಗಿ ವಿಂಡೀಸ್ ವೇಗಿಗೆ ಕೆಲವು ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. 

ಕಳೆದ ಭಾನುವಾರ ಈ ಅಪಘಾತ ಸಂಭವಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಒಶೇನ್ ಥಾಮಸ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ.

ವೆಸ್ಟ್‌ ಇಂಡೀಸ್ ಮತ್ತು ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೊನೆಯ ಬಾರಿ ಕೆರಿಬಿಯನ್ ಪಡೆಯ ಪರ ಆಡಿದ್ದ ಥಾಮಸ್, ಮೂರು ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ಆದರೆ, ಫೆ.22ರಿಂದ ನಡೆಯಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಅವರನ್ನು ತಂಡದಿಂದ ಕೈಬಿಡಲಾಗಿತ್ತು.

ವೆಸ್ಟ್‌ ಇಂಡೀಸ್ ಪರ 20 ಏಕದಿನ ಮತ್ತು 10 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಆಡಿರುವ ಒಶೇನ್ ಥಾಮಸ್, ಕ್ರಮವಾಗಿ 27 ಮತ್ತು 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 21ಕ್ಕೆ 5 ವಿಕೆಟ್ ಉರುಳಿಸಿರುವುದು ಅವರ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ.

SCROLL FOR NEXT