ಕ್ರಿಕೆಟ್

ಲಯ ಕಳೆದುಕೊಂಡಿರುವ ರಿಷಭ್ ಪಂತ್ ಗೆ ಅಜಿಂಕ್ಯಾ ರೆಹಾನೆ ಕೊಟ್ಟ ಸಲಹೆ ಏನು ಗೊತ್ತೇ?

Srinivas Rao BV

ಈವರೆಗೂ ಎಲ್ಲಾ ಫಾರ್ಮ್ಯಾಟ್ ಗಳಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಆಯ್ಕೆಯಾಗಿದ್ದ ರಿಷಭ್ ಪಂತ್ ಇತ್ತೀಚಿನ ದಿನಗಳಲ್ಲಿ ಲಯ ಕಳೆದುಕೊಳ್ಳುತ್ತಿದ್ದಾರೆ. ಪರಿಣಾಮ ನಿಗದಿತ ಓವರ್ ಗಳ ಪಂದ್ಯದಲ್ಲಿ ಕೆಎಲ್ ರಾಹುಲ್ ಹಾಗೂ ಟೆಸ್ಟ್ ನಲ್ಲಿ ವೃದ್ಧಿಮಾನ್ ಸಾಹ ಪಂತ್ ಗೆ ಪರ್ಯಾಯವಾಗಿ ಕಾಣುತ್ತಿದ್ದಾರೆ.  

ಪಂತ್ ನ ವೈಫಲ್ಯಗಳ ಬಗ್ಗೆ ಭಾರತದ ಉಪನಾಯಕ ಅಜಿಂಕ್ಯಾ ರಹಾನೆ ಕೆಲವು ಸಲಹೆಗಳನ್ನು ನೀಡಿದ್ದಾರೆ. "ನೀವು ಏನನ್ನು ಎದುರಿಸುತ್ತಿದ್ದೀರೋ ಅದನ್ನು ಒಪ್ಪಿಕೊಳ್ಳಿ, ಸಕಾರಾತ್ಮಕವಾಗಿರಿ, ಅದು ಹಿರಿಯರೇ ಇರಲಿ, ಕಿರಿಯರೇ ಇರಲಿ ಯಾವುದೇ ಆಟಗಾರನಿಂದ ಸಾಧ್ಯವಾದಷ್ಟೂ ಕಲಿಯಲು ಯತ್ನಿಸಿ ಎಂದು ಅಜಿಂಕ್ಯಾ ರಹಾನೆ ತಮ್ಮ ಸಹ ಕ್ರೀಡಾಪಟುವಿಗೆ ಸಲಹೆ ನೀಡಿದ್ದಾರೆ. 

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನಲ್ಲಿ ಭಾರತಕ್ಕೆ ಮುಂದಿನ ಸರಣಿ ಇರುವುದು ನ್ಯೂಜಿಲೆಂಡ್ ನೆಲದಲ್ಲಿ. ನ್ಯೂಜಿಲೆಂಡ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ. ಶುಕ್ರವಾರ ವೆಲ್ಲಿಂಗ್ಟನ್​ನಲ್ಲಿ ಆರಂಭವಾಗಲಿರುವ ಟೆಸ್ಟ್​ನಲ್ಲಿ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಆಡುವ ಸಾಧ್ಯತೆ ಇದೆ ಈ ಹಿನ್ನೆಲೆಯಲ್ಲಿ ಅಜಿಂಕ್ಯಾ ರಹಾನೆ ಸಲಹೆ ನೀಡಿದ್ದಾರೆ. 

ಉತ್ತಮ ಕ್ರಿಕೆಟ್ ಆಗಿ ಸುಧಾರಣೆಯಾಗಲು ಆತ್ಮಾವಲೋಕನ ಬಹು ಮುಖ್ಯವಾದದ್ದು ಹಾಗೂ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದರಿಂದಲೇ ಅದು ಪ್ರಾರಂಭವಾಗಲಿದೆ ಎಂಬುದು ರಹಾನೆ ಅಭಿಪ್ರಾಯ 

ಯಾರೂ ಕೂಡ ಹೊರಗೆ ಕೂರುವುದಕ್ಕೆ ಬಯಸುವುದಿಲ್ಲ. ನಿರ್ದಿಷ್ಟ ಪಂದ್ಯದಲ್ಲಿ ನಿಮ್ಮ ತಂಡಕ್ಕೆ ಏನು ಬೇಕೋ ಅದ್ನನು ನೀವು ಒಪ್ಪಿಕೊಳ್ಳಬೇಕು, ಎದುರಿಸುತ್ತಿರುವ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದು ಬಹುಮುಖ್ಯ, ನಿಯಂತ್ರಿಸಲು ಸಾಧ್ಯವಿರುವುದರತ್ತ ಹೆಚ್ಚು ಗಮನಹರಿಸಿ, ಹೆಚ್ಚು ಶ್ರಮ ಹಾಕಿ, ಕ್ರಿಕೆಟಿಗರಾಗಿ ಸುಧಾರಣೆಯಾಗಿ ಎಂದು ರಹಾನೆ ಸಲಹೆ ನೀಡಿದ್ದಾರೆ. 

SCROLL FOR NEXT