ಕ್ರಿಕೆಟ್

ಇರ್ಫಾನ್ ಪಠಾಣ್ ಮೊದಲ ಓವರ್ ಹ್ಯಾಟ್ರಿಕ್ ವಿಕೆಟ್ ದಾಖಲೆ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ: ರೋಹಿತ್ ಶರ್ಮಾ

Lingaraj Badiger

ನವದೆಹಲಿ: ಕ್ರಿಕೆಟ್ ನ ಎಲ್ಲ ಮಾದರಿಗೆ ನಿವೃತ್ತಿ ಘೋಷಿಸಿದ ಇರ್ಫಾನ್ ಪಠಾಣ್ ಅವರು ಕ್ರಿಕೆಟ್ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಮೂವರು ಬೌಲರ್ ಗಳಲ್ಲಿ ಭಾರತದ ಇರ್ಫಾನ್ ಪಠಾಣ್ ಕೂಡ ಒಬ್ಬರಾಗಿದ್ದಾರೆ. ಅದರಲ್ಲೂ ಪಂದ್ಯದ ಮೊದಲನೇ ಓವರ್ ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ವಿಶ್ವದ ಮೊದಲ ವೇಗಿ ಎಂಬ ವಿಶಿಷ್ಠ ದಾಖಲೆ ಪಠಾಣ್ ಅವರ ಹೆಸರಿನಲ್ಲಿದೆ.

ಇರ್ಫಾನ್ ಪಠಾಣ್ ಕ್ರಿಕೆಟ್ ಗೆ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ ಬಳಿಕ ಟ್ವೀಟ್ ಮಾಡಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ, ”ಕ್ರಿಕೆಟ್ ಕ್ರೀಡೆಯಲ್ಲಿ ತೋರಿರುವ ಉತ್ಸಾಹ ಹಾಗೂ ಕೊಡುಗೆ ಅದ್ಭತವಾದದ್ದು. ನಿಮ್ಮದು ಖುಷಿಯ ನಿವೃತ್ತಿಯಾಗಿದೆ. ಟೆಸ್ಟ್ ಪಂದ್ಯದ ಮೊದಲನೇ ಓವರ್ ನಲ್ಲಿ ನಿಮ್ಮಂತೆ ಹ್ಯಾಟ್ರಿಕ್ ಸಾಧನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಮುಂದಿನ ಅಧ್ಯಾಯಕ್ಕೆ ನನ್ನ ಕಡೆಯಿಂದ ಶುಭಾಶಯಗಳು,” ಎಂದು ತಿಳಿಸಿದ್ದಾರೆ.

2007ರ ಐಸಿಸಿ ಟಿ-20 ವಿಶ್ವಕಪ್ ಫೈನಲ್ ಹಣಾಹಣಿಯಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯದ ಗೆಲುವಿನಲ್ಲಿ 35ರ ಪ್ರಾಯದ ಇರ್ಫಾನ್ ಪಠಾಣ್ ಮಹತ್ತರ ಪಾತ್ರವಹಿಸಿದ್ದರು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಭಾರತ ಅಂದು ಚೊಚ್ಚಲ ಚುಟುಕು ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು.

“ಕ್ರಿಕೆಟ್ ಚೆಂಡು ಸ್ವಿಂಗ್, ದೊಡ್ಡ ಹೊಡೆತಗಳಿಗೆ ಬ್ಯಾಟ್ ಸ್ವಿಂಗ್ ಇವುಗಳನ್ನು ನೀವು ಅದ್ಭುತವಾಗಿ ಮಾಡಿದ್ದೀರಿ. ಹಲವು ಬಾರಿ ಭಾರತ ತಂಡದ ಹೆಮ್ಮೆಯ ಆಟಗಾರ ಎನಿಸಿಕೊಂಡಿದ್ದೀರಿ. ನಿಮ್ಮೊಂದಿಗೆ ಆಡಿರುವುದು ಸಂತಸವಾಗಿದೆ. ಮೊದಲನೇ ಇನಿಂಗ್ಸ್ ಮುಗಿಸಿದ್ದೀರಿ ಎರಡನೇ ಇನಿಂಗ್ಸ್ ನಲ್ಲಿಯೂ ಖುಷಿಯಾಗಿರಿ,” ಎಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಶ್ಲಾಘಿಸಿದ್ದಾರೆ.

ಎಡಗೈ ವೇಗಿ ಇರ್ಫಾನ್ ಪಠಾಣ್ 29 ಟೆಸ್ಟ್ ಹಾಗೂ 120 ಏಕದಿನ ಹಾಗೂ 24 ಟಿ-20 ಪಂದ್ಯಗಳಿಂದ 301 ವಿಕೆಟ್ ಪಡೆದಿದ್ದಾರೆ.

SCROLL FOR NEXT