ಕ್ರಿಕೆಟ್

ಭಾರತ-ಆಸ್ಟ್ರೇಲಿಯಾ ನಡುವೆ ಮೊದಲನೇ ಏಕದಿನ ಪಂದ್ಯ ನಾಳೆ

Srinivasamurthy VN

ಮುಂಬೈ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಗೆ  ಸಜ್ಜಾಗಿದ್ದು, ನಾಳೆ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲನೇ ಹಣಾಹಣಿಯಲ್ಲಿ ಮುಖಾಮುಖಿಯಾಗುತ್ತಿವೆ. ಕಳೆದ ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿದ್ದ ಕೊಹ್ಲಿ ಪಡೆ ಇದೀಗ ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.

ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 2-0 ಮುನ್ನಡೆ ಗಳಿಸಿತ್ತು. ಆದಾಗ್ಯೂ, ನಂತರ ಪುಟಿದೆದ್ದ ಪ್ರವಾಸಿ ಆಸ್ಟ್ರೇಲಿಯಾ ತಂಡ ಸತತ ಮೂರೂ ಪಂದ್ಯಗಳನ್ನು ಗೆದ್ದು ಸರಣಿಯನ್ನು 3-2 ಅಂತರದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತ್ತು. ಈ ಫಲಿತಾಂಶ ಖಂಡಿತ ಎರಡೂ ತಂಡಗಳ ಮನಸ್ಸಿನಲ್ಲಿ ಇದ್ದೇ ಇರುತ್ತದೆ.

ಕಳೆದ ಏಕದಿನ ವಿಶ್ವಕಪ್ ಟೂರ್ನಿಗೆ ತಂಡಕ್ಕೆ ಮರಳಿದ್ದ ಸ್ಟೀವನ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇದೀಗ ತಂಡದಲ್ಲಿದ್ದಾರೆ. ಇದು ಪ್ರವಾಸಿ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾ ಟಿ-20 ಸರಣಿಯಿಂದ ಈ ಇಬ್ಬರೂ ಆಟಗಾರರು ಅತ್ಯುತ್ತಮ ಲಯದಲ್ಲಿದ್ದಾರೆ. ಇತ್ತೀಚೆಗೆ ವೆಸ್ಟ್‌ ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳ ಎದುರು ಸೀಮಿತ ಓವರ್ ಗಳ ಮಾದರಿಯಲ್ಲಿ ಯಶಸ್ವಿಯಾಗಿರುವ ಭಾರತ ತಂಡ ಆತ್ಮವಿಶ್ವಾಸದಲ್ಲಿದೆ. ವಿಶ್ರಾಂತಿಯಿಂದ ರೋಹಿತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಅವರು ಮರಳಿದ್ದರಿಂದ ಭಾರತ ತಂಡಕ್ಕೆ ಇನ್ನಷ್ಟು ಬಲ ಬಂದಂತಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ನಾಳಿನ ಮೊದಲನೇ ಪಂದ್ಯಕ್ಕೆ ಮನೀಷ್ ಪಾಂಡೆ ಹಾಗೂ ಕೇದಾರ್ ಜಾಧವ್ ಅಥವಾ ರವೀಂದ್ರ ಜಡೇಜಾ ಹಾಗೂ ಶಿವಂ ದುಬೆ ಅವರಲ್ಲಿ ಯಾರನ್ನು ಕಣಕ್ಕೆ ಇಳಿಸುವುದು ಎಂಬಂತೆ ಟೀಮ್ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ತಲೆ ನೋವಾಗಿದೆ. ಇದಕ್ಕೆ ಉತ್ತರ ನಾಳೆ ಬೆಳಗ್ಗೆ ಟೀಮ್ ಮ್ಯಾನೇಜ್ ಮೆಂಟ್ ನೀಡಲಿದೆ. ಸ್ಪಿನ್ ವಿಭಾಗದಲ್ಲಿರುವ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್ ಅವರಲ್ಲಿ ಯಾರಿಗೆ ನಾಳೆ ನಾಯಕ ವಿರಾಟ್ ಕೊಹ್ಲಿ ಮಣೆ ಹಾಕಲಿದ್ದಾರೆಂಬುದು ಇನ್ನು ರಹಸ್ಯವಾಗಿಯೇ ಇದೆ.  ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಭಾರತದ ವಿರುದ್ಧ 2-1 ಅಂತರದಲ್ಲಿ ಆಸೀಸ್ ಏಕದಿನ ಸರಣಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಸರಣಿ ಪ್ರವಾಸಿಗರಿಗೆ ಫೇವರಿಟ್ ಆಗಿದೆ ಎಂದಿದ್ದಾರೆ.

ಕಳೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಇದಾದ ಬಳಿಕ ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ ಪಂದ್ಯ ಆಡಲಿಲ್ಲ. ಆದರೆ, ಕಳೆದ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಟಿ-20 ಸರಣಿಗಳನ್ನು ಆಡಿತ್ತು. ಕಳೆದ ಟೆಸ್ಟ್ ಸರಣಿಗಳಲ್ಲಿ ರನ್ ಹೊಳೆ ಹರಿಸಿರುವ ಆಸ್ಟ್ರೇಲಿಯಾ ತಂಡದ ಮಾರ್ನಸ್ ಲಾಬುಶೇನ್ ಅವರು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 50 ಓವರ್ ಗಳ ಮಾದರಿಗೆ ಪದಾರ್ಪಣೆ ಮಾಡುವ ಹೊಸ್ತಿಲಲ್ಲಿದ್ದಾರೆ. ಆ ಮೂಲಕ ಟೆಸ್ಟ್ ಸರಣಿಯಲ್ಲಿ ಹರಿಸಿರುವ ರನ್ ಹೊಳೆಯನ್ನು ಏಕದಿನ ಮಾದರಿಯಲ್ಲಿ ಹರಿಸುವ ತುಡಿತವನ್ನು ಅವರು ಹೊಂದಿದ್ದಾರೆ.

ತಂಡಗಳು: 
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ(ಉಪ ನಾಯಕ), ರಿಷಭ್ ಪಂತ್, ಜಸ್ಪ್ರಿತ್ ಬುಮ್ರಾ, ಯಜುವೇಂದ್ರ ಚಾಹಲ್, ಶಿಖರ್ ಧವನ್, ಶಿವಂ ದುಬೆ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಕೇದಾರ್ ಜಾದವ್, ಮನೀಷ್ ಪಾಂಡೆ, ಕೆ.ಎಲ್ ರಾಹುಲ್, ನವದೀಪ್ ಸೈನಿ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್.

ಆಸ್ಟ್ರೇಲಿಯಾ: ಆ್ಯರೋನ್ ಫಿಂಚ್(ನಾಯಕ), ಅಲೆಕ್ಸ್ ಕ್ಯಾರಿ (ಉಪ ನಾಯಕ, ವಿ.ಕೀ), ಪ್ಯಾಟ್ ಕಮಿನ್ಸ್, ಅಸ್ಟನ್ ಅಗರ್, ಪೀಟರ್ ಹ್ಯಾಂಡ್ಸ್ ಕೊಂಬ್, ಜೋಶ್ ಹೇಜಲ್ ವುಡ್, ಮಾರ್ನಸ್ ಲಾಬುಶೇನ್, ಕೇನ್ ರಿಚರ್ಡ್ ಸನ್, ಆರ್ಸಿ ಶಾರ್ಟ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಆಸ್ಟನ್ ಟರ್ನರ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ,.

ಸಮಯ: ನಾಳೆ ಮಧ್ಯಾಹ್ನ 01:30
ಸ್ಥಳ: ವಾಂಖೆಡೆ ಕ್ರೀಡಾಂಗಣ, ಮುಂಬೈ

SCROLL FOR NEXT