ಕ್ರಿಕೆಟ್

ಧೋನಿ ಕೈಬಿಟ್ಟಿಲ್ಲ, ಆದರೆ ಕಾಂಟ್ರ್ಯಾಕ್ಟ್ ಗೆ ಅರ್ಹತೆ ಇಲ್ಲ, ಏಕೆಂದರೆ ಅವರು ಆಟವಾಡಿಲ್ಲ: ಬಿಸಿಸಿಐ ಮೂಲಗಳು

Lingaraj Badiger

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಸಂಪೂರ್ಣ ಕೈಬಿಟ್ಟಿಲ್ಲ. ಆದರೆ ಅವರು ಕಾಂಟ್ರ್ಯಾಕ್ಟ್ ಪಟ್ಟಿಯಲ್ಲಿ ಸ್ಥಾನ ಪಡೆಯುವ ಅರ್ಹತೆ ಪಡೆದಿಲ್ಲ. ಏಕೆಂದರೆ ಅವರು ಈ ಅವಧಿಯಲ್ಲಿ ಯಾವುದೇ ಪಂದ್ಯಗಳನ್ನು ಆಡಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಮೂಲಗಳು ತಿಳಿಸಿವೆ.

ಮಹೇಂದ್ರ ಸಿಂಗ್ ಧೋನಿ ಅವರನ್ನು ಕೇಂದ್ರ ಒಪ್ಪಂದ ಪಟ್ಟಿಯಿಂದ ಕೈಬಿಡುವುದು ಅನಿವಾರ್ಯವಾಗಿತ್ತು ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯು ಹೆಸರುಗಳನ್ನು ಅಂತಿಮಗೊಳಿಸುವ ಮುನ್ನ ಅವರಿಗೆ ಸರಿಯಾದ ಮಾಹಿತಿ ನೀಡಲಾಗಿದೆ ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಬಿಸಿಸಿಐ ಇಂದು ಬಿಡುಗಡೆ ಮಾಡಿರುವ 2019-2020ರ ಕೇಂದ್ರ ಒಪ್ಪಂದ ಪಟ್ಟಿಯಿಂದ ಧೋನಿ ಅವರನ್ನು ಕೈಬಿಡಲಾಗಿದ್ದು, ಕಳೆದ ಬಾರಿ ಎ ಗ್ರೇಡ್ ನಲ್ಲಿ ಸ್ಥಾನ ಪಡೆದಿದ್ದ ಧೋನಿ ಈ ಬಾರಿ ಯಾವುದೇ ವಿಭಾಗದಲ್ಲಿ ಸ್ಥಾನ ಪಡೆದಿಲ್ಲ. ಗುತ್ತಿಗೆ ಪಟ್ಟಿಯಿಂದ ಧೋನಿ ಕೈಬಿಟ್ಟಿರುವುದಕ್ಕೆ ಧೋನಿ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಸಿಐನ ಅಧಿಕಾರಿಗಳು, ಧೋನಿ ಅವರು ಕಳೆದ 6 ತಿಂಗಳಿಂದ ಯಾವುದೇ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಹೀಗಾಗಿ ಅವರು ಒಪ್ಪಂದ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಈ ಕುರಿತು ಬಿಸಿಸಿಐನ ಹಿರಿಯ ಅಧಿಕಾರಿಗಳು ಧೋನಿಯೊಂದಿಗೆ ಮಾತನಾಡಿದ್ದಾರೆ ಎಂದರು.

ಈ ವರ್ಷ ಧೋನಿ ಸೇರಿದಂತೆ ಗುತ್ತಿಗೆ ಪಟ್ಟಿಯಲ್ಲಿ ಇರದ ಇತರೆ ಆಟಗಾರ ಭಾರತಕ್ಕಾಗಿ ಆಡಿದರೆ, ಅವರು ಸ್ವಯಂಚಾಲಿತವಾಗಿ ಗುತ್ತಿಗೆ ಪಟ್ಟಿಗೆ ಸೇರುತ್ತಾರೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

‘‘ಸತ್ಯಗಳನ್ನು ಸರಿಯಾಗಿ ತಿಳಿದುಕೊಳ್ಳೋಣ. ನೀವು ದೇಶಕ್ಕಾಗಿ ಆಡುವ ಬಗ್ಗೆೆ ಅಥವಾ ಇಲ್ಲವೇ ಎಂಬುದರ ಕುರಿತು ಒಪ್ಪಂದಕ್ಕೆೆ ಅಂತಿಮ ಅಧಿಕಾರವಲ್ಲ. ನಿಯಮಿತ ಆಟಗಾರರಿಗೆ ಒಪ್ಪಂದವನ್ನು ನೀಡಲಾಗುತ್ತದೆ ಮತ್ತು ಪ್ರಾಮಾಣಿಕವಾಗಿ ಹೇಳಬೇಕೆಂದರೆ, 2019 ರ ವಿಶ್ವಕಪ್ ನಂತರ ಧೋನಿ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಆದ್ದರಿಂದ, ಅವರನ್ನು ಒಪ್ಪಂದದಲ್ಲಿ ಹೆಸರಿಸಲಾಗಿಲ್ಲ,’’ ಎಂದು ಸ್ಪಷ್ಟಪಡಿಸಿದ್ದಾರೆ.

2019 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತ ನಂತರ ಧೋನಿ ಸಂಪೂರ್ಣವಾಗಿ ಕ್ರಿಕೆಟ್ ಮೈದಾನದಿಂದ ಹೊರಗುಳಿದಿದ್ದಾರೆ ಮತ್ತು ನಿವೃತ್ತಿಯ ಬಗ್ಗೆ ಮೌನ ತಾಳಿದ್ದಾರೆ. 

ಧೋನಿ ಅವರನ್ನು ಗುತ್ತಿಗೆ ಪಟ್ಟಿಯಿಂದ ತೆಗೆದು ಹಾಕಿದ್ದು, ಭಾರತೀಯ ಕ್ರಿಕೆಟ್‌ನಲ್ಲಿ ಅವರ ದಿನಗಳು ಮುಗಿದಿವೆ ಎಂಬುದನ್ನು ಸ್ಪಷ್ಟ ಪಡಿಸುತ್ತಿವೆ ಎನ್ನಲಾಗುತ್ತಿದೆ.

SCROLL FOR NEXT