ಕ್ರಿಕೆಟ್

ನಾಳೆ ಆಸಿಸ್ ವಿರುದ್ಧ 2ನೇ ಏಕದಿನ ಪಂದ್ಯ: ಮಾಡು ಇಲ್ಲವೆ ಮಡಿ ಸ್ಥಿತಿಯಲ್ಲಿ ಭಾರತ

Lingaraj Badiger

ರಾಜ್‌ಕೋಟ್: ಆಸ್ಟ್ರೇಲಿಯಾ ವಿರುದ್ಧ ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿದ್ದ ಭಾರತ ತಂಡಕ್ಕೆ ಇದೀಗ ಮಾಡು ಇಲ್ಲವೆ ಮಡಿ ಪರಿಸ್ಥಿತಿ ಎದುರಾಗಿದೆ.

ನಾಳೆ ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಂಗಳದಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಕೊಹ್ಲಿ ಪಡೆ ಆಸಿಸ್ ವಿರುದ್ಧ ಗೆದ್ದು ಸರಣಿ ಸಮಬಲ ಸಾಧಿಸಿಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದೆ.

ಟೀಮ್ ಇಂಡಿಯಾ ಮೊದಲನೇ ಹಣಾಹಣಿಯಲ್ಲಿ 10 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಸೋಲಿನ ಆಘಾತದ ನಡುವೆ ಭಾರತ ತಂಡದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಅನುಪಸ್ಥಿಯಲ್ಲಿ ನಾಳೆ ಎರಡನೇ ಕಾದಾಟಕ್ಕೆ ಸಜ್ಜಾಗಿದೆ. 

ಬ್ಯಾಟಿಂಗ್ ಮಾಡುವ ವೇಳೆ ಪ್ಯಾಟ್ ಕಮಿನ್‌ಸ್‌ ಎಸೆತದಲ್ಲಿ ಪಂತ್ ಅವರ ಹೆಲ್ಮೆಟ್‌ಗೆ ಚೆಂಡು ತಾಗಿತ್ತು. ನಂತರ, ಅವರು ಅಂಗಳದಿಂದ ಹೊರಗುಳಿದಿದ್ದರು. ಅವರ ಬದಲು ಕೆ.ಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡಿದ್ದರು. ನಾಳಿನ ಪಂದ್ಯದಲ್ಲೂ ರಾಹುಲ್ ಅವರೇ ವಿಕೆಟ್ ಕೀಪಿಂಗ್ ಮುಂದುವರಿಸಲಿದ್ದಾರೆ. ಇದೀಗ ಪಂತ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಕಳೆದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಗೆ ಮೂರನೇ ಕ್ರಮಾಂಕ ಬಿಟ್ಟುಕೊಟ್ಟಿದ್ದ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಇದೀಗ ನಾಳಿನ ಪಂದ್ಯದಲ್ಲಿ ರಾಹುಲ್ ಯಾವ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆಂಬುದು ಇನ್ನೂ ಸ್ಪಷ್ಟತೆಯಿಲ್ಲ. 

ರಿಷಭ್ ಪಂತ್ ಅಲಭ್ಯರಾಗಿರುವುದರಿಂದ ಆಲ್‌ರೌಂಡರ್ ಕೇದಾರ್ ಜಾಧವ್ ಅವರು ಬ್ಯಾಟಿಂಗ್ ಜತೆಗೆ ಬೌಲಿಂಗ್ ನಲ್ಲೂ ತಂಡಕ್ಕೆ ನೆರವಾಗಬಲ್ಲರು. ಕಳೆದ ಪಂದ್ಯದಲ್ಲಿ ಕೇವಲ 255 ರನ್ ದಾಖಲಿಸಿದ್ದ ಭಾರತ ತಂಡ, ಎರಡನೇ ಪಂದ್ಯದಲ್ಲಿ ಇನ್ನಷ್ಟು ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ ಹೆಚ್ಚಿನ ರನ್ ಗಳಿಸುವ ಕಡೆ ಗಮನ ಹರಿಸಲಿದೆ. 

ವಾಂಖೆಡೆ ಪಿಚ್ ಬ್ಯಾಟಿಂಗ್‌ಗೆ ಸಹಕರಿಸುತ್ತಿದ್ದರೂ ಭಾರತ ತಂಡ ಹೇಳಿಕೊಳ್ಳುವಂತ ಮೊತ್ತ ದಾಖಲಿಸಿರಲಿಲ್ಲ. ಶಿಖರ್ ಧವನ್ ಹಾಗೂ ಕೆ.ಎಲ್ ರಾಹುಲ್ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ 121 ರನ್ ಗಳಿಸಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌‌ಮನ್ ಗಳು ವಿಫಲರಾಗಿದ್ದರು. ಆದರೆ, ಕೆಳ ಕ್ರಮಾಂಕದ ಆಟಗಾರರು ಸುಧಾರಿತ ಬ್ಯಾಟಿಂಗ್‌ನಿಂದ ಭಾರತ ಸ್ಫರ್ಧಾತ್ಮಕ ಮೊತ್ತ ಕಲೆ ಹಾಕಿತ್ತು. ಆದರೆ, ಆಸ್ಟ್ರೇಲಿಯಾ ತಂಡಕ್ಕೆ ಈ ಮೊತ್ತ ಸಾಕಾಗಲಲ್ಲ. ಒಂದೂ ವಿಕೆಟ್ ಕಳೆದುಕೊಳ್ಳದೆ ಗುರಿ ಮುಟ್ಟಿ ಗೆಲುವಿನ ನಗೆ ಬೀರಿತ್ತು.

ಒಟ್ಟಾರೆ, ನಾಳಿನ ಪಂದ್ಯದಲ್ಲಿ ಬ್ಯಾಟ್ಸ್‌‌ಮನ್ ಗಳ ಜತೆಗೆ ಬೌಲಿಂಗ್ ವಿಭಾಗ ಕೂಡ ಪುಟಿದೇಳುವ ಅಗತ್ಯವಿದೆ. ಆಗಿದ್ದಲ್ಲಿ ಮಾತ್ರ ಬಲಿಷ್ಠ ಆಸ್ಟ್ರೇಲಿಯಾಕ್ಕೆ ತಿರುಗೇಟು ನೀಡಲು ಸಾಧ್ಯ. ಇಲ್ಲವಾದಲ್ಲಿ ಗೆಲುವು ಅಸಾಧ್ಯ.

ಮತ್ತೊಂದೆಡೆ ದಾಖಲೆಯ ಜಯ ಸಾಧಿಸಿದ್ದ ಆ್ಯರೋನ್ ಫಿಂಚ್ ಪಡೆ ನಾಳಿನ ಪಂದ್ಯದಲ್ಲಿ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವ ಯೋಜನೆಯೊಂದಿಗೆ ಕಣಕ್ಕೆ ಇಳಿಯಲಿದೆ. 

ಕಳೆದ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ ಪ್ರವಾಸಿ ತಂಡ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಲು ಸಾಧ್ಯವಾಗಿತ್ತು. ಇದೀಗ ಎರಡನೇ ಹಣಾಹಣಿಗೂ ಅದೇ ತಂಡವನ್ನು ನಾಯಕ ಆ್ಯರೋನ್ ಫಿಂಚ್ ಉಳಿಸಿಕೊಳ್ಳಲಿದ್ದಾರೆ. ಫಿಂಚ್ ಹಾಗೂ ವಾರ್ನರ್ ತಲಾ ಶತಕಗಳನ್ನು ಸಿಡಿಸಿ ತಂಡವನ್ನು ಬಹುಬೇಗ ಗೆಲುವಿನ ದಡ ಸೇರಿಸಿದ್ದರು. ಹಾಗಾಗಿ, ಮಾರ್ನಸ್ ಲಾಬುಶೇನ್ ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಎರಡನೇ ಪಂದ್ಯದಲ್ಲಿಯೂ ಅವರ ಮೇಲೆ ಸಾಕಷ್ಟು ಗಮನ ಇದೆ. 

ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ(ಉಪ ನಾಯಕ), ಜಸ್ಪ್ರಿತ್ ಬುಮ್ರಾ, ಯಜುವೇಂದ್ರ ಚಾಹಲ್, ಶಿಖರ್ ಧವನ್, ಶಿವಂ ದುಬೆ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಕೇರ್ದಾ ಜಾದವ್, ಮನೀಷ್ ಪಾಂಡೆ, ಕೆ.ಎಲ್ ರಾಹುಲ್(ವಿ.ಕೀ), ನವದೀಪ್ ಸೈನಿ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್. 

ಆಸ್ಟ್ರೇಲಿಯಾ: ಆ್ಯರೋನ್ ಫಿಂಚ್ (ನಾಯಕ), ಅಲೆಕ್‌ಸ್‌ ಕ್ಯಾರಿ (ಉಪ ನಾಯಕ, ವಿ.ಕೀ), ಪ್ಯಾಟ್ ಕಮಿನ್ಸ್‌, ಅಸ್ಟನ್ ಅಗರ್, ಪೀಟರ್ ಹ್ಯಾಂಡ್ಸ್  ಕೊಂಬ್, ಜೋಶ್ ಹೇಜಲ್‌ವುಡ್, ಮಾರ್ನಸ್ ಲಾಬುಶೇನ್, ಕೇನ್ ರಿಚರ್ಡ್‌ಸನ್, ಆರ್ಸಿ ಶಾರ್ಟ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಆಸ್ಟನ್ ಟರ್ನರ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ.

ಸಮಯ: ನಾಳೆ ಮಧ್ಯಾಹ್ನ 01:30
ಸ್ಥಳ: ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್, ರಾಜ್‌ಕೋಟ್

SCROLL FOR NEXT