ಕ್ರಿಕೆಟ್

ಟೀಮ್ ಇಂಡಿಯಾ ಸೂಪರ್ ಫ್ಯಾನ್ ಚಾರುಲತಾ ಪಟೇಲ್ ವಿಧಿವಶ

Raghavendra Adiga

ಭಾರತೀಯ ಕ್ರಿಕೆಟ್ ತಂಡದ "ಸೂಪರ್‌ಫ್ಯಾನ್" ಚಾರುಲತಾ ಪಟೇಲ್ ವಯೋಸಹಜ ಕಾಯಿಲೆಗಳಿಂದ ನಿಧನರಾಗಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಅವರಿಗೆ ಆಶೀರ್ವದಿಸಿದ್ದ ಈಕೆಯ ನಿಧನಕ್ಕೆ ಬಿಸಿಸಿಐ ಸಂತಾಪ ಸೂಚಿಸಿ ಟ್ವೀಟ್ ಮಾಡಿದೆ.

ಪಟೇಲ್ (87) ಸೋಮವಾರ ನಿಧನರಾದರು ಎಂದು ಅವರ ಅಧಿಕೃತ ಇನ್ಸ್ಟಾಗ್ರಾಮ್ ಪುಟ 'ಕ್ರಿಕೆಟ್ ದಾದಿ' ನಲ್ಲಿ ಪೋಸ್ಟ್ ಹಾಕಲಾಗಿದೆ. 

"ಭಾರವಾದ ಹೃದಯದಿಂದ, ಹಂಚಿಕೊಳ್ಳುವ ವಿಷಯವೆಂದರೆ ನಮ್ಮ ಹಿರಿಯ ಅಜ್ಜಿ  ಜನವರಿ 13 ರಂದು ಸಂಜೆ 5: 30 ಕ್ಕೆ ಕೊನೆಯುಸಿರು ಎಳೆದರು." ಪೋಸ್ಟ್ ಹೇಳಿದೆ.

ಪಟೇಲ್ ನಿಧನಕ್ಕೆ ಬಿಸಿಸಿಐ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದೆ.'"ಟೀಮ್ ಇಂಡಿಯಾ ಸೂಪರ್ ಫ್ಯಾನ್ ಚಾರುಲತಾ ಪಟೇಲ್ ಜೀ ಅವರು ಯಾವಾಗಲೂ ನಮ್ಮ ಹೃದಯದಲ್ಲಿ ಉಳಿಯಲಿದ್ದಾರೆ. ಈ ವಯಸ್ಸಿನಲ್ಲೂ ಅವರು ತಂಡದ ಮೇಲಿದ್ದ ಅಭಿಮಾನ ಎಲ್ಲರಿಗೂ ಪ್ರೇರಣೆ ನೀಡಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ," ಎಂದು ಬಿಸಿಸಿಐ ಟ್ವಿಟ್ ಮಾಡಿದೆ.

ಕಳೆದ ವರ್ಷ ಜುಲೈ ತಿಂಗಳಲ್ಲಿ ಬಾಂಗ್ಲಾದೇಶ ವಿರುದ್ಧ ವಿಶ್ವಕಪ್‌ ರೌಂಡ್ ರಾಬಿನ್ ಪಂದ್ಯ ವೀಕ್ಷಿಸಲು ಚಾರುಲತಾ ಅವರು ಎಜ್ ಬಾಸ್ಟನ್ ಅಂಗಳಕ್ಕೆ ತೆರಳಿದ್ದರು. ಅಲ್ಲದೇ, ಅವರು ಕೊಹ್ಲಿ ಪಡೆಯನ್ನು ಹುರಿದುಂಬಿಸುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದರು. ಆ ಪಂದ್ಯದ ಸಂಪೂರ್ಣ ಅವಧಿಯಲ್ಲಿ ಅವರು ಟೀಮ್ ಇಂಡಿಯಾವನ್ನು ಉತ್ಸಾಹದಿಂದ ಹುರಿದುಂಬಿಸಿದರು. ತಂಡ ಗಳಿಸಿದ ಪ್ರತಿ ಬೌಂಡರಿ ವೇಳೆ  ತ್ರಿವರ್ಣ ಧ್ವಜವನ್ನು ಬೀಸುತ್ತಲೇ ಇದ್ದಳು.

28 ರನ್ ಗಳಿಂದ ಭಾರತ ತಂಡ ಗೆಲುವು ದಾಖಲಿಸಿದ ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಅವರು ಚಾರುಲತಾ ಅವರನ್ನು ಭೇಟಿಯಾಗಿ, ಅವರಿಂದ ಆಶಿರ್ವಾದ ಪಡೆದುಕೊಂಡಿದ್ದರು. ಜು.14 ರಂದು ನಡೆಯುವ ಐಸಿಸಿ ವಿಶ್ವಕಪ್ ಫೈನಲ್ ಹಣಾಹಣಿಗೆ ಭಾರತ ಅರ್ಹತೆ ಪಡೆಯಬೇಕು ಹಾಗೂ ಪ್ರಶಸ್ತಿ ಗೆಲ್ಲಬೇಕು ಎಂದು ಆಶಿಸಿದ್ದರು. ಆದರೆ, ಚಾರುಲತಾ ಅವರ ಆಸೆ ಈಡೇರಲಿಲ್ಲ. ಭಾರತ ಸೆಮಿಫೈನಲ್ ಹಣಾಹಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು

SCROLL FOR NEXT