ಕ್ರಿಕೆಟ್

ಇಂಡೋ-ಕಿವೀಸ್ ಟಿ20 ಪಂದ್ಯ: ಒಂದೇ ಪಂದ್ಯದಲ್ಲಿ ಐದು ಅರ್ಧಶತಕ ಸೇರಿ ಹಲವು ದಾಖಲೆ ಸೃಷ್ಟಿ!

Srinivasamurthy VN

ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ ಈ ಒಂದು ಪಂದ್ಯ ಟಿ20 ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದೆ.

ಐದು ಅರ್ಧಶತಕ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ನೂತನ ದಾಖಲೆ ನಿರ್ಮಾಣ ಮಾಡಿದ್ದು, ಈ ಪಂದ್ಯದಲ್ಲಿ ಒಟ್ಟು ಐದು ಮಂದಿ ದಾಂಡಿಗರು ಅರ್ಧಶತಕ ಸಿಡಿಸುವ ಮೂಲಕ ದಾಖಲೆ ನಿರ್ಮಾಣ ಮಾಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯವೊಂದರಲ್ಲಿ ಬಂದ ಗರಿಷ್ಠ ಅರ್ಧಶತಕಗಳಿದಾಗಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಪರ ಕೊಲಿನ್ ಮರ್ನೋ (59 ರನ್), ಕೇನ್ ವಿಲಿಯಮ್ಸನ್ (51 ರನ್) ಮತ್ತು ರಾಸ್ ಟೇಲರ್ (ಅಜೇಯ 54ರನ್), ಇತ್ತ ಭಾರತದ ಪರ ಕೆಎಲ್ ರಾಹುಲ್ (56 ರನ್) ಮತ್ತು ಶ್ರೇಯಸ್ ಅಯ್ಯರ್ (ಅಜೇಯ 58 ರನ್) ಗಳಿಸಿದರು. ಕೇವಲ ಐದು ರನ್ ಗಳ ಅಂತರದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ವಂಚಿತರಾದರು.

ಭಾರತದ ವಿರುದ್ಧ ಟಿ20ಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಇಸ್ ಸೋದಿ
ಇನ್ನು ಟಿ20ಯಲ್ಲಿ ಭಾರತದ ವಿರುದ್ಧ ಕಿವೀಸ್ ಬೌಲರ್ ಇಶ್ ಸೋದಿ ಗರಿಷ್ಠ ವಿಕೆಟ್ ಗಳಿಸಿದ ದಾಖಲೆ ನಿರ್ಮಿಸಿದರು. ಈ ಪಂದ್ಯದಲ್ಲಿ ಇಶ್ ಸೋದಿ ರಾಹುಲ್ ಮತ್ತು ಶಿವಂ ದುಬೆರನ್ನು ಔಟ್ ಮಾಡಿ ಭಾರತದ ವಿರುದ್ಧ ತಮ್ಮ ವಿಕೆಟ್ ಗಳಿಕೆಯನ್ನು 13ಕ್ಕೆ ಏರಿಕೆ ಮಾಡಿಕೊಂಡರು. ಉಳಿದಂತೆ ಪಾಕಿಸ್ತಾನದ ವೇಗಿ ಉಮರ್ ಗುಲ್ 11 ವಿಕೆಟ್ ಕಬಳಿಸಿ 2ನೇ ಸ್ಥಾನದಲ್ಲಿದ್ದಾರೆ.

4 ಬಾರಿ 200ಕ್ಕೂ ಅಧಿಕ ರನ್ ಗಳ ಯಶಸ್ವೀ ರನ್ ಚೇಸ್
ಇನ್ನು ಈ ಪಂದ್ಯದಲ್ಲಿ 204 ರನ್ ಗಳ ಗುರಿಯನ್ನು ಯಶಸ್ವಿಯಾಗಿ ಮುಟ್ಟಿದ ಭಾರತ, ಆ ಮೂಲಕ ಮತ್ತೊಂದು ದಾಖಲೆ ನಿರ್ಮಾಣ ಮಾಡಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಬಾರಿ 200ಕ್ಕೂ ಅಧಿಕ ರನ್ ಗಳ ಗುರಿ ಮುಟ್ಟಿ ಗೆಲುವು ಸಾಧಿಸಿದ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಭಾರತ ತಂಡ ಒಟ್ಟು 4 ಬಾರಿ 200ಕ್ಕೂ ಅಧಿಕ ರನ್ ಗಳ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದ್ದು, ಆಸ್ಟ್ರೇಲಿಯಾ ತಂಡ 2 ಬಾರಿ ಮಾತ್ರ ಈ ಸಾಧನೆ ಮಾಡಿದೆ.

ಭಾರತಕ್ಕೆ ಮೂರನೇ ಗರಿಷ್ಠ ರನ್ ಚೇಸ್
ಇನ್ನು ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತಕ್ಕೆ ಇದು ಮೂರನೇ ಗರಿಷ್ಠ ಯಶಸ್ವೀ ರನ್ ಚೇಸ್ ಪಂದ್ಯವಾಗಿದೆ. ಇದಕ್ಕೂ ಮೊದಲು 2019ರಲ್ಲಿ ಭಾರತ ಹೈದರಾಬಾದ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 208 ರನ್ ಗಳ ಗುರಿಯನ್ನು ಯಶಸ್ವಿಯಾಗಿ ಗುರಿ ಮುಟ್ಟಿತ್ತು. ಅದಕ್ಕೂ ಮೊದಲು 2009ರಲ್ಲಿ ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ 207ರನ್ ಗುರಿಯನ್ನು ಯಶಸ್ವಿಯಾಗಿ ಮುಟ್ಟಿತ್ತು.

SCROLL FOR NEXT