ಕ್ರಿಕೆಟ್

 ನಾಲ್ಕನೇ ಟಿ20: ಮನೀಷ್ ಪಾಂಡೆ ಅರ್ಧಶತಕ, ನ್ಯೂಜಿಲೆಂಡ್ ಗೆ 166 ರನ್ ಗುರಿ ನೀಡಿದ ಭಾರತ

Raghavendra Adiga

ವೆಲ್ಲಿಂಗ್ಟನ್: ಕೆ.ಎಲ್ ರಾಹುಲ್ (39 ರನ್) ಹೊರತುಪಡಿಸಿ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ವೈಫಲ್ಯದ ಹೊರತಾಗಿಯೂ ಮನೀಷ್ ಪಾಂಡೆ (ಔಟಾಗದೆ 50 ರನ್) ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ನಾಲ್ಕನೇ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ 166 ರನ್ ಸ್ಪರ್ಧಾತ್ಮಕ ಗುರಿ ನೀಡಿದೆ.
  
ಇಲ್ಲಿನ ಸ್ಕೈ ಕ್ರೀಡಾಂಗಣದಲ್ಲಿ  ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ರೋಹಿತ್ ಶರ್ಮಾ ಸ್ಥಾನದಲ್ಲಿ ರಾಹುಲ್ ಜತೆ ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ ಅವರು ಎಂಟು ರನ್ ಗಳಿಸಿ ಬೇಗ ವಿಕೆಟ್ ಒಪ್ಪಿಸಿದರು.
  
ನಾಯಕ ವಿರಾಟ್ ಕೊಹ್ಲಿ(11), ಶ್ರೇಯಸ್ ಅಯ್ಯರ್(1), ಶಿವಂ ದುಬೆ(12) ನಿರಾಸೆ ಮೂಡಿಸಿದರು. ಆದರೆ, ಎಂದಿನಂತೆ ಅತ್ಯುತ್ತಮ ಬ್ಯಾಟಿಂಗ್ ಕೆ.ಎಲ್ ರಾಹುಲ್ 26 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿಯೊಂದಿಗೆ 39 ರನ್ ಗಳಿಸಿದರು. ನಂತರ, ಇವರು ಇಶ್ ಸೋಧಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.


  
ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾದ ಮನೀಷ್ ಪಾಂಡೆ ಸಮಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿದರು. ತಂಡದ ಜವಾಬ್ದಾರಿ ಹೊತ್ತು ಬ್ಯಾಟಿಂಗ್ ಮಾಡಿದ ಅವರು ನಿರೀಕ್ಷೆಯಂತೆ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. 36 ಎಸೆತಗಳಲ್ಲಿ ಮೂರು ಬೌಂಡರಿಯೊಂದಿಗೆ 50 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರ ಅರ್ಧಶತಕದ ಬಲದಿಂದ ಭಾರತ ನಿಗದಿತ 20 ಓವರ್ ಗಳಿಗೆ ಎಂಟು ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದೆ. ಆ ಮೂಲಕ ನ್ಯೂಜಿಲೆಂಡ್ ತಂಡಕ್ಕೆ 166 ರನ್ ಗುರಿ ನೀಡಿದೆ. ಇದರಲ್ಲಿ ಶಾರ್ದೂಲ್ ಠಾಕೂರ್(20) ಹಾಗೂ ನವದೀಪ್ ಸೈನಿ (11) ಅಲ್ಫ ಕಾಣಿಕೆ ನೀಡಿದರು.
  
ಅತ್ಯುತ್ತಮ ಬೌಲಿಂಗ್ ಮಾಡಿದ ಇಶ್ ಸೋಧಿ 26 ರನ್ ನೀಡಿ ಮೂರು ವಿಕೆಟ್ ಪಡೆದರು. ಹಮೀಶ್ ಬೆನೆಟ್ ಎರಡು ವಿಕೆಟ್ ಕಿತ್ತರು.
  
ಸಂಕ್ಷಿಪ್ತ ಸ್ಕೋರ್
  

ಭಾರತ: 20 ಓವರ್ ಗಳಿಗೆ 165/8 (ಮನೀಷ್ ಪಾಂಡೆ ಔಟಾಗದೆ 50, ಕೆ.ಎಲ್ ರಾಹುಲ್ 39, ಶಾರ್ದೂಲ್ ಠಾಕೂರ್ 20; ಇಶ್ ಸೋಧಿ 26 ಕ್ಕೆ 3, ಹಮೀಶ್ ಬೆನೆಟ್ 41 ಕ್ಕೆ 2)

SCROLL FOR NEXT