ಕ್ರಿಕೆಟ್

ಕೊನೆಗೂ ಕ್ರಿಕೆಟ್ ಆರಂಭಕ್ಕೆ ಕ್ಷಣಗಣನೆ: ನಾಳೆ ಇಂಗ್ಲೆಂಡ್‌-ವೆಸ್ಟ್‌ ಇಂಡೀಸ್‌ ಪ್ರಥಮ ಟೆಸ್ಟ್‌ ಆರಂಭ

Srinivasamurthy VN

ಸೌತಾಂಪ್ಟನ್: ಸತತ ಮೂರೂವರೆ ತಿಂಗಳ ಉಪವಾದ ಬಳಿಕ ಕ್ರಿಕೆಟ್‌ ಪ್ರಿಯರಿಗೆ ಟೆಸ್ಟ್‌ ಕ್ರಿಕೆಟ್‌ನ ಭಕ್ಷ ಭೋಜನ ಲಭ್ಯವಾಗಲು ಇನ್ನು ಕೆಲವೇ ಗಂಟೆಗಳು ಮಾತ್ರವೇ ಬಾಕಿ ಉಳಿದಿದೆ. 

ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಕ್ರಿಕೆಟ್‌ ಲೋಕಕ್ಕೆ ಅಕ್ಷರಶಃ ಬೀಗ ಜಡಿಯುವಂತಾಗಿತ್ತು. ಆದರೆ, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿ ಜೀವ ನೀಡುವ ಪ್ರಯತ್ನ ನಡೆಸಲಾಗುತ್ತಿದ್ದು, ಕೋವಿಡ್‌-19 ಸೋಂಕಿನ ನಡುವೆಯೂ ಕ್ರಿಕೆಟ್‌ ಆಡುವುದು ಸಾಧ್ಯ ಎಂಬುದನ್ನು ಸಾಬೀತು ಪಡಿಸುವ ನಿಟ್ಟಿನಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳ ಮತ್ತು ಹೊಸ ನಿಯಮಗಳ ಅಡಿಯಲ್ಲಿ ಆತಿಥೇಯ ಇಂಗ್ಲೆಂಡ್‌ ಮತ್ತು ಪ್ರವಾಸಿ ವೆಸ್ಟ್‌ ಇಂಡೀಸ್‌ ತಂಡಗಳು ಮೂರು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯನ್ನಾಡಲು ಸಜ್ಜಾಗಿ ನಿಂತಿವೆ.

ಇತ್ತ ತಂಡಗಳು ಬುಧವಾರ (ಜುಲೈ 8 ರಂದು) ಸೌತಾಂಪ್ಟನ್‌ನ ದಿ ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್‌ ಸರಣಿಯ ಪ್ರಥಮ ಹಣಾಹಣಿಯಲ್ಲಿ ಮುಖಾಮುಖಿಯಾಗಲು ಸಜ್ಜಾಗಿ ನಿಂತಿವೆ. ಇದಕ್ಕಾಗಿ ಕಳೆದ 15 ದಿನಗಳಿಂದ ಎರಡೂ ತಂಡಗಳು ಭರ್ಜರಿ ಅಭ್ಯಾಸವನ್ನೇ ಮಾಡಿವೆ. ಇನ್ನು ಸುದೀರ್ಘಾವಧಿಯ ನಂತರದ ಲೈವ್‌ ಕ್ರಿಕೆಟ್‌ ವೀಕ್ಷಿಸಲು ಹಾತೊರೆಯುತ್ತಿರುವ ಕ್ರಿಕೆಟ್‌ ಪ್ರೇಮಿಗಳು ಇಂಗ್ಲೆಂಡ್‌ ಕಡೆಗೆ ಮುಖಮಾಡಿ ಕುಳಿತಿದ್ದಾರೆ ಎಂದರೆ ತಪ್ಪಾಗಲಾರದರು.

ಇಂಗ್ಲೆಂಡ್‌ನಲ್ಲಿ ಪಂದ್ಯ ಬೆಳಗ್ಗೆ 11ಗಂಟೆಗೆ ಶುರುವಾಗಲಿದ್ದು, ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಆಟ ಶುರುವಾಗಲಿದೆ. ಪಂದ್ಯವನ್ನು ಸೋನಿ ಟೆನ್‌ ನೆಟ್‌ವರ್ಕ್ ಚಾನೆಲ್‌ನಲ್ಲಿ ಲೈವ್‌ ವೀಕ್ಷಿಸಬಹುದಾಗಿದೆ. ಕೋವಿಡ್‌-19 ಸೋಂಕಿನಿಂದ ಈ ಪಂದ್ಯಕ್ಕೆ ಯಾವುದೇ ಅಡಚಣೆ ಆಗದಂತೆ ಎಚ್ಚರ ವಹಿಸಲಾಗಿದ್ದು, ಹೀಗಾಗಿ ಮುಚ್ಚಿದ ಕ್ರೀಡಾಂಗಣದಲ್ಲಿ ಸರಣಿಯ ಎಲ್ಲ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಜೊತೆಗೆ ಎರಡೂ ತಂಡಗಳ ಆಟಗಾರರು ಅಗತ್ಯದ 14 ದಿನಗಳ ಕ್ವಾರಂಟೈನ್‌ಗೆ ಒಳಪಟ್ಟು ಕೊರೊನಾ ವೈರಸ್‌ ಸೋಂಕು ಪತ್ತೆಯ ಪರೀಕ್ಷೆಯಲ್ಲಿ ಸೋಂಕು ಇಲ್ಲವೆಂದು ಸಾಬೀತಾದ ಬಳಿಕವಷ್ಟೇ ಪಂದ್ಯದಲ್ಲಿ ಆಡುವ ಅರ್ಹತೆ ಪಡೆದುಕೊಂಡಿದ್ದಾರೆ.

ಹವಾಮಾನ ವರದಿ
ಸೌತಾಂಪ್ಟನ್‌ನಲ್ಲಿ ಟೆಸ್ಟ್ ಪಂದ್ಯದ ಮೊದಲ ಎರಡು ದಿನಗಳಲ್ಲಿ ಮೋಡ ಮುಚ್ಚಿದ ವಾತಾವರಣ ಇದ್ದು ಮಳೆಯಾಗುವ ಸಾಧ್ಯತೆ ಇದೆ. ಆದರೂ ಆಟ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಕೊನೆಯ ಮೂರು ದಿನಗಳಲ್ಲಿ ಮಳೆಯಾಗುವ ಯಾವುದೇ ಸೂಚನೆ ಇಲ್ಲ ಎಂದು ಸ್ಥಳೀಯ ಹವಾಮಾನ ಇಲಾಖೆ ವರದಿ ಮಾಡಿದೆ. ಇತಿಹಾಸವನ್ನು ಗಮನದಲ್ಲಿಟ್ಟು ಹೇಳುವುದಾದರೆ ಟಾಸ್‌ ಗೆದ್ದ ತಂಡ ಇಲ್ಲಿ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚಿದೆ.

ಇಂಗ್ಲೆಂಡ್‌ ತಂಡದ ಸಂಭಾವ್ಯ XI 
1. ರೋರಿ ಬರ್ನ್ಸ್‌, 2. ಡಾಮಿನಿಕ್‌ ಸಿಬ್ಲೀ, 3. ಜಾಕ್‌ ಕ್ರಾವ್ಲೀ, 4. ಜೋ ಡೆನ್ಲಿ, 5. ಬೆನ್‌ ಸ್ಟೋಕ್ಸ್‌ (ನಾಯಕ), 6. ಓಲೀ ಪೋಪ್‌, 7. ಜೋಸ್‌ ಬಟ್ಲರ್(ವಿಕೆಟ್‌ಕೀಪರ್), 8. ಡಾಮ್‌ ಬೆಸ್‌, 9. ಜೇಮ್ಸ್‌ ಆಂಡರ್ಸನ್‌, 10. ಜೋಫ್ರ ಆರ್ಚರ್‌, 11. ಮಾರ್ಕ್‌ ವುಡ್‌.

ವೆಸ್ಟ್‌ ಇಂಡೀಸ್‌ ತಂಡದ ಸಂಭ್ಯವ್ಯ XI
1. ಕ್ರೇಗ್‌ ಬ್ರಾತ್‌ವೇಟ್‌, 2. ಜಾನ್‌ ಕ್ಯಾಂಪ್‌ಬೆಲ್‌, 3. ಶೇಯ್‌ ಹೋಪ್‌, 4. ಶಮ್ರಾಹ್ ಬ್ರೂಕ್ಸ್‌, 5. ರಾಸ್ಟನ್‌ ಚೇಸ್‌, 6. ಜೆರ್ಮೈನ್‌ ಬ್ಲ್ಯಾಕ್‌ವುಡ್‌, 7. ಶೇನ್‌ ಡೌರಿಚ್ (ವಿಕೆಟ್‌ಕೀಪರ್‌), 8. ಜೇಸನ್‌ ಹೋಲ್ಡರ್‌, 9. ರಖೀಮ್‌ ಕಾರ್ನ್‌ವಾಲ್‌, 10. ಕೆಮಾರ್‌ ರೋಚ್, 11. ಶನಾನ್‌ ಗೇಬ್ರಿಯೆಲ್‌.

SCROLL FOR NEXT