ಕ್ರಿಕೆಟ್

ಸಾವಯವ ಕೃಷಿಯಲ್ಲಿ ಎಂಎಸ್ ಧೋನಿ ಬ್ಯುಸಿ!

Nagaraja AB

ರಾಂಚಿ:ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಯಾವುದೇ ಜಾಹಿರಾತು ಒಪ್ಪಂದಗಳನ್ನು ಮಾಡಿಕೊಳ್ಳದಿರಲು ನಿರ್ಧರಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಸಾವಯವ ಕೃಷಿಯಲ್ಲಿ ಬ್ಯುಸಿಯಾಗಿದ್ದಾರೆ.ಶೀಘ್ರದಲ್ಲಿ ತಮ್ಮದೇ ಬ್ರಾಂಡಿನ ಪರಿಸರ ಸ್ನೇಹಿ ರಸಗೊಬ್ಬರವನ್ನು ಪರಿಚಯಿಸಲಿದ್ದಾರೆ.

ಕಳೆದ ಒಂದು ವರ್ಷದಿಂದ ಕ್ರಿಕೆಟ್ ನಿಂದ ದೂರ ಇದ್ದು, ರಾಂಚಿಯಲ್ಲಿನ ತಮ್ಮ ನಿವಾಸದಲ್ಲಿ ಏಕಾಂತ ಜೀವನ ಕಳೆಯುತ್ತಿರುವ 39 ವರ್ಷದ ಧೋನಿ ಬಗ್ಗೆ ಅವರ ಮ್ಯಾನೇಜರ್, ಬಾಲ್ಯದ ಗೆಳೆಯ ಮಿಹಿರ್ ದಿವಾಕರ್ ಪಿಐಟಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದಾರೆ.

ದೇಶಭಕ್ತಿ ಧೋನಿಯ ರಕ್ತದಲ್ಲಿಯೇ ಇದೆ. ಅದು ದೇಶ (ರಕ್ಷಣೆಗಾಗಿ) ಅಥವಾ ಕೃಷಿ (ಭೂಮಿ)ಗಾಗಿ ಸೇವೆ ಸಲ್ಲಿಸಲಿದೆ. ಅದರ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ. 40ರಿಂದ 50 ಎಕರೆ ಕೃಷಿ ಭೂಮಿ ಹೊಂದಿದ್ದು, ಪರಂಗಿ , ಬಾಳೆ ಹಣ್ಣಿನಂತಹ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದಿವಾಕರ್ ಹೇಳಿದರು.

ಎಂದಿನಂತೆ ಜೀವನ ಮರಳುವವರೆಗೂ ಯಾವುದೇ ಜಾಹಿರಾತು ರಾಯಬಾರಿಯಾಗದಿರಲು ನಿರ್ಧರಿಸಿದ್ದಾರೆ. ನಿಯೋ ಗ್ಲೋಬಲ್ ಹೆಸರಿನ ಕಂಪನಿ ಅಡಿ ಸದ್ಯದಲ್ಲಿಯೇ ಸಾವಯವ ರಸಗೊಬ್ಬರವನ್ನು ಪರಿಚಯಿಸಲಿದ್ದಾರೆ.ಧೋನಿಯ ಜಮೀನಿನಲ್ಲಿ ಗೊಬ್ಬರವನ್ನು ಪರೀಕ್ಷಿಸಲಾಗುತ್ತಿದೆ ಎಂದು ಅವರು ತಿಳಿಸಿದರು.ಇತ್ತೀಚಿಗೆ ಧೋನಿ ವಿಡಿಯೋವೊಂದರಲ್ಲಿ ಸಾವಯವ ಕೃಷಿ ಉತ್ತೇಜಿಸುವ ಮಾತುಗಳನ್ನಾಡಿದ್ದರು.

ತಜ್ಞರು ಹಾಗೂ ವಿಜ್ಞಾನಿಗಳ ತಂಡವೊಂದು ರಸಗೊಬ್ಬರನ್ನು ಅಭಿವೃದ್ಧಿಪಡಿಸಿದೆ. ಎರಡು ಮೂರು ತಿಂಗಳಲ್ಲಿ ಆ ರಸಗೊಬ್ಬರನ್ನು ಬಿಡುಗಡೆಗೊಳಿಸಲಾಗುವುದು ಎಂದು ದಿವಾಕರ್ ಹೇಳಿದರು.

ಧೋನಿ ನಿವೃತ್ತಿ ಕುರಿತ ಪ್ರಶ್ನೆಗೆ ಉತ್ತರಿಸಿದ ದಿವಾಕರ್,  ಸ್ನೇಹಿತರಾಗಿ ಕ್ರಿಕೆಟ್ ಸಂಬಂಧ ಧೋನಿಯೊಂದಿಗೆ ಏನನ್ನೂ ಮಾತನಾಡುವುದಿಲ್ಲ,ಐಪಿಎಲ್  ಆಡಲು ತುಂಬಾ ಸಿದ್ಧತೆ ನಡೆಸಿದ್ದರು.ಲಾಕ್ ಡೌನಿಗೂ ಒಂದು ತಿಂಗಳು ಮುಂಚೆ ಧೋನಿ ಚೆನ್ನೈನಲ್ಲಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು, ಈಗ ಫಾರ್ಮ್ ಹೌಸ್ ನಲ್ಲಿ ಫಿಟ್ ನೆಸ್ ಕಾಪಾಡಿಕೊಳ್ಳುತ್ತಿದ್ದಾರೆ. ಮುಂದಿನ ಜೀವನ ಹೇಗಿರುತ್ತದೆ ಎಂಬುದರ ಮೇಲೆ ಎಲ್ಲವೂ ಆವಲಂಬಿಸಿದೆ ಎಂದು ದಿವಾಕರ್ ಮಾತು ಪೂರ್ಣಗೊಳಿಸಿದ್ದಾರೆ.

SCROLL FOR NEXT