ಕ್ರಿಕೆಟ್

ಉತ್ತಮ ಪ್ರದರ್ಶನ ನೀಡಿದರೆ ಸಾಲದು, ಸರಣಿ ಗೆಲ್ಲಬೇಕು: ಕೊಹ್ಲಿಗೆ ದಾದಾ ಕಿವಿಮಾತು

Nagaraja AB

ನವದೆಹಲಿ: ಭಾರತ ತಂಡ ಇದೇ ವರ್ಷದ ಅಂತ್ಯದಲ್ಲಿ ಆಸೀಸ್‌ ಪ್ರವಾಸ ಕೈಗೊಳ್ಳಲಿದ್ದು, ತಲಾ ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಕ್ರಿಕೆಟ್‌ ಸರಣಿಗಳನ್ನು ಆಡಲಿದೆ. ಜೊತೆಗೆ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಸಲುವಾಗಿ 4 ಪಂದ್ಯಗಳ ಟೆಸ್ಟ್‌ ಸರಣಿಯಲ್ಲೂ ಪೈಪೋಟಿ ನಡೆಸಲಿದೆ. 

ಅಂದಹಾಗೆ ಸರಣಿ ಆರಂಭಕ್ಕೆ ಇನ್ನೂ ಐದು ತಿಂಗಳ ಸಮಯ ಬಾಕಿಯಿದ್ದು, ಈಗಾಗಲೇ ಕ್ರಿಕೆಟ್‌ ಅಭಿಮಾನಿಗಳು ಈ ಸರಣಿಯತ್ತ ಕುತೂಹಲದಿಂದ ಎದುರು ನೋಡುವಂತೆ ಮಾಡಿದೆ. ಭಾರತ ತಂಡ ಈ ಪ್ರವಾಸದಲ್ಲಿ ಮೊದಲ ಬಾರಿ ಆಸೀಸ್‌ ನೆಲದಲ್ಲಿ ಡೇ-ನೈಟ್‌ ಟೆಸ್ಟ್‌ ಕೂಡ ಆಡಲಿದೆ ಎಂಬುದು ವಿಶೇಷ.

ಅಕ್ಟೋಬರ್‌ನಲ್ಲಿ ಕಾಂಗರೂ ನಾಡಿಗೆ ಕಾಲಿಟ್ಟು ಅಲ್ಪಾವಧಿಯ ಕ್ವಾರಂಟೈನ್ ಬಳಿಕ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿರುವ ಟೀಮ್‌ ಇಂಡಿಯಾ, ಬಳಿಕ  ಡಿ. 3ರಂದು ಗಬ್ಬಾದಲ್ಲಿ ಮೊದಲ ಟೆಸ್ಟ್‌ ಪಂದ್ಯವನ್ನು ಆಡಲಿದೆ. ನಂತರ ಅಡಿಲೇಡ್‌ನಲ್ಲಿ ಡಿ.12ರಿಂದ ಆಸೀಸ್‌ ಅಂಗಣದಲ್ಲಿ ತನ್ನ ಚೊಚ್ಚಲ ಡೇ-ನೈಟ್‌ ಟೆಸ್ಟ್‌ ಆಡಲಿದ್ದು, 3ನೇ ಮತ್ತು 4ನೇ ಟೆಸ್ಟ್‌ಗಳು ಕ್ರಮವಾಗಿ ಮೆಲ್ಬೋರ್ನ್‌ ಮತ್ತು ಸಿಡ್ನಿಯಲ್ಲಿ ಜರುಗಲಿವೆ. ಇದಾದ ಬಳಿಕ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿ ನಡೆಯಲಿದೆ.

ಈ ಸರಣಿ ಕುರಿತಂತೆ ಮಾತನಾಡಿರುವ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದರೆ ಸಾಲದು, ಸರಣಿ ಗೆಲ್ಲಬೇಕು ಎಂಬ ನಿರೀಕ್ಷೆ ಹೊಂದಿರುವುದಾಗಿ ದಾದಾ ಕಿವಿಮಾತು ಹೇಳಿದ್ದಾರೆ.ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಕೊಹ್ಲಿ ಜೊತೆ ಸಂಪರ್ಕದಲ್ಲಿದ್ದು, ತಂಡದ ಫಿಟ್ನೆಸ್ ಗುಣಮಟ್ಟದ ಬಗ್ಗೆ ನಿರಂತರವಾಗಿ ಮಾತನಾಡುತ್ತಿರುವುದಾಗಿ 48 ವರ್ಷದ  ಗಂಗೂಲಿ ತಿಳಿಸಿದ್ದಾರೆ.

ಕೊಹ್ಲಿ ಜೊತೆಗೆ ಸಂಪರ್ಕದಲ್ಲಿದ್ದು, ಫಿಟ್ ನೆಸ್ ಕಾಯ್ದುಕೊಳ್ಳುವಂತೆ ಹೇಳಿದ್ದೇನೆ. ಆರು ತಿಂಗಳ ಕಾಲ ಆಡದಿದ್ದು, ವೇಗಿಗಳು ಗಾಯಗೊಂಡು ಕಮ್ ಬ್ಯಾಂಕ್ ಆಗುವುದು ಬೇಕಾಗಿಲ್ಲ,ಅವರಿಗೆ ತರಬೇತಿ ನೀಡಬೇಕಾಗುತ್ತದೆ. ಆದರೆ, ತರಬೇತಿ ಮತ್ತು ಕ್ರಿಕೆಟ್ ವಿಭಿನ್ನ ಎಂದು ಗಂಗೂಲಿ ಹೇಳಿದ್ದಾರೆ.

ಮೊಹಮ್ಮದ್ ಶಮಿ ಅಥವಾ ಬೂಮ್ರಾ, ಇಶಾಂತ್ ಶರ್ಮಾ, ಅಥವಾ ಹಾರ್ದಿಕ್ ಪಾಂಡ್ಯ ಯಾರೇ ಆಗಲೀ ಆಸ್ಟ್ರೇಲಿಯಾದಲ್ಲಿ ಉತ್ತಮ ಫಿಟ್ ನೆಸ್ ಇರುವಂತೆ ಸಲಹೆ ನೀಡಿರುವುದಾಗಿ ತಿಳಿಸಿರುವ ಗಂಗೂಲಿ, ಇದೊಂದು ಕಠಿಣ ಸರಣಿಯಾಗಲಿದೆ. ಆಸ್ಟೇಲಿಯಾ ತಂಡ ಬಲಶಾಲಿಯಾಗಿದೆ.ಆದರೆ, ನಮ್ಮ ತಂಡ ಕೂಡಾ ಉತ್ತಮವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್  ಎರಡರಲ್ಲೂ ಉತ್ತಮ ಸ್ಥಿತಿಯಲ್ಲಿ  ನಮ್ಮ ತಂಡ ಇದೆ ಎಂದಿದ್ದಾರೆ.

SCROLL FOR NEXT