ಕ್ರಿಕೆಟ್

ದಿ ವಾಲ್ ದ್ರಾವಿಡ್ ಗೂ ಕಾಡಿತ್ತು ಅಭದ್ರತೆ, ನಿವೃತ್ತಿ ನಂತರ ಏನು ಎಂಬ ಪ್ರಶ್ನೆಗೆ ಸಲಹೆ ಕೊಟ್ಟಿದ್ದು ಆ ಲೆಜೆಂಡ್ ಕ್ರಿಕೆಟಿಗ!

Srinivas Rao BV

ಕ್ರಿಕೆಟ್ ಜಗತ್ತಿನಲ್ಲಿ 'ದಿ ವಾಲ್' ಎಂಬ ಖ್ಯಾತಿಗೆ ಭಾಜನರಾಗಿರುವ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಗೆ ನಿವೃತ್ತಿಯ ನಂತರವೇನು ಎಂಬ ಪ್ರಶ್ನೆ ಕಾಡಿತ್ತಂತೆ.

ಭಾರತ-ಎ ತಂಡ ಹಾಗೂ ಅಂಡರ್ 19 ಕ್ರಿಕೆಟ್ ತಂಡದ ಕೋಚ್ ಜವಾಬ್ದಾರಿಯನ್ನೂ ವಹಿಸಿಕೊಳ್ಳುವುದಕ್ಕೂ ಮುನ್ನ ಹಾಗೂ ನಿವೃತ್ತಿಯ ನಂತರದ ನಡುವೆ ದ್ರಾವಿಡ್ ಅವರಿಗೆ ಮುಂದೇನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಈ ಅವಧಿಯಲ್ಲಿ ಐಪಿಎಲ್ ಗಾಗಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಹಾಗೂ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದನ್ನು ಅದೃಷ್ಟ ಎಂದಿರುವ ದ್ರಾವಿಡ್ ತಮ್ಮ ನಿವೃತ್ತಿಯ ನಂತರದ ಯೋಜನೆಗಳೇನಾಗಿತ್ತು ಎಂಬುದರ ಬಗ್ಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಡಬ್ಲ್ಯೂವಿ ರಮಣ್ ಅವರ ಇನ್ಸೈಡ್ ಔಟ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ್ದಾರೆ. 

"ನಿವೃತ್ತಿಯ ನಂತರದ ಪ್ರಾರಂಭಿಕ ದಿನಗಳಲ್ಲಿ ಕಾಮೆಂಟರಿಯಲ್ಲಿ ಆಸಕ್ತಿ ಇತ್ತು. ಆದರೆ ಅದನ್ನು ಆಯ್ಕೆ ಮಾಡಿಕೊಂಡಲ್ಲಿ ಕ್ರೀಡೆಯಿಂದ ದೂರ ಉಳಿಯುವ ಭಾವನೆ ಆವರಿಸಲಾರಂಭಿಸಿತು. ಈ ವೇಳೆ ನನಗೆ ಹಿರಿಯ, ಲೆಜೆಂಡ್ ಕ್ರಿಕೆಟಿಗರಾದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಸಲಹೆ ನೀಡಿದ್ದರು" ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.

ರಾಹುಲ್, ಯಾವುದನ್ನು ಮಾಡುವುದಕ್ಕೂ ನೇರವಾಗಿ ಧುಮುಕಬೇಡಿ, ಒಂದಷ್ಟು ವರ್ಷ ಬೇರೆ ಬೇರೆ ವಿಭಾಗಗಳಲ್ಲಿ ತೊಡಗಿಸಿಕೊಳ್ಳಿ, ಆ ನಂತರ ನಿಮಗೇನು ಇಷ್ಟವಾಗುತ್ತದೋ ಅದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಕಪಿಲ್ ದೇವ್ ಸಲಹೆ ನೀಡಿದ್ದರು ಎಂದು ರಾಹುಲ್ ದ್ರಾವಿಡ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದೇ ನನಗೆ ಅತ್ಯಂತ ಪ್ರಿಯವಾದ ಸಂಗತಿ, ಈ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಯಾವುದೇ ಫಲಿತಾಂಶ ದೊರೆಯದ ಯುವ ಕ್ರಿಕೆಟಿಗರಿಗೆ ತರಬೇತಿ ನೀಡುವುದೇ ನನಗೆ ಅತ್ಯಂತ ಸಮಾಧಾನಕರವಾದ ವಿಷಯ ಎಂದು ದ್ರಾವಿಡ್ ಹೇಳಿದ್ದಾರೆ. 

ಇದೇ ವೇಳೆ ತಮ್ಮ ವೃತ್ತಿ ಜೀವನದಲ್ಲೂ ಅಭದ್ರತೆ ಕಾಡಿತ್ತು ಎಂಬುದನ್ನು ಬಹಿರಂಗಪಡಿಸಿರುವ ದ್ರಾವಿಡ್, 1998 ರಲ್ಲಿ ಸ್ಟ್ರೈಕ್ ರೇಟ್ ಕಾರಣದಿಂದಾಗಿ ಅವರನ್ನು ಏಕದಿನ ಪಂದ್ಯಗಳಿಂದ ದೂರ ಇಟ್ಟಾಗ ತಾವು ಟೆಸ್ಟ್ ಗೆ ಮಾತ್ರ ಸೀಮಿತ, ಏಕದಿನ ಪಂದ್ಯಗಳಿಗೆ ನಾನು ಸೂಕ್ತವಾಗಬಲ್ಲೆನಾ ಎಂಬ ಅಭದ್ರತೆ ಕಾಡಿತ್ತು ಎಂದಿದ್ದಾರೆ.

SCROLL FOR NEXT