ಕ್ರಿಕೆಟ್

ಕೊರೋನಾ ಸೋಂಕಿತ ಆಫ್ರಿದಿ ಶೀಘ್ರವೇ ಗುಣಮುಖರಾಗಲಿ, ದ್ವೇಷ ಬಿಟ್ಟು ಶುಭ ಹಾರೈಸಿದ ಗೌತಮ್ ಗಂಭೀರ್‌

Vishwanath S

ನವದೆಹಲಿ: ಕ್ರೀಡಾಂಗಣದ ಹೊರಗೆ ಮತ್ತು ಒಳಗೆ ಎಷ್ಟೇ ಜಿದ್ದಾಜಿದ್ದಿನ ವೈರಿಗಳಾದರೂ, ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಿರುವ ಪಾಕಿಸ್ತಾನದ ಮಾಜಿ ಆಲ್‌ರೌಂಡರ್‌ ಶಾಹಿದ್‌ ಅಫ್ರಿದಿ ಬಹುಬೇಗನೆ ಗುಣಮುಖರಾಗಲಿ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್‌ ಗಂಭೀರ್‌ ಹಾರೈಸುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದಾರೆ.

ಕಾಶ್ಮೀರ ಗಡಿ ವಿಚಾರದಲ್ಲಿ ಆಗಾಗ ಮೂಗು ತೂರಿಸಿ ಅನಗತ್ಯ ಹೇಳಿಕೆಗಳನ್ನು ನೀಡುವ ಮೂಲಕ ಭಾರತೀಯ ಭಾವನೆಗಳನ್ನು ಕದಡುತ್ತಲೇ ಬಂದಿರುವ ಶಾಹಿದ್‌ ಅಫ್ರಿದಿ, ಶನಿವಾರವಷ್ಟೇ ತಾವು ಕೋವಿಡ್‌-19 ಸೋಂಕಿಗೆ ತುತ್ತಾಗಿರುವುದನ್ನು ಟ್ವಿಟರ್‌ ಮೂಲಕ ಬಹಿರಂಗಪಡಿಸಿದ್ದರು.

ಮಹಾಮಾರಿ ಕೊರೋನಾಗೆ ಯಾರೊಬ್ಬರೂ ಕೂಡ ಸಿಲುಕಬಾರದು. ಶಾಹಿದ್‌ ಅಫ್ರಿದಿ ವಿರುದ್ಧ ರಾಜಕೀಯ ವಿಚಾರಗಳಲ್ಲಿ ವೈಮನಸ್ಸು ಇದೆ. ಆದರೆ ಅವರು ಬಹುಬೇಗನೆ ಚೇತರಿಸಲಿ ಎಂದು ಬಯಸುತ್ತೇನೆ. ಅಫ್ರಿದಿ ಅಷ್ಟೇ ಅಲ್ಲ ನನ್ನ ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಿರುವ ಪ್ರತಿಯೊಬ್ಬ ವ್ಯಕ್ತಿಯೂ ಬಹುಬೇಗ ಚೇತರಿಸಲಿ ಎಂಬುದು ನನ್ನ ಬಯಕೆ ಎಂದು ಆಜ್‌ ತಕ್ ವಾಹಿನಿಗೆ ಗಂಭೀರ್‌ ಹೇಳಿಕೆ ನೀಡಿದ್ದಾರೆ.

ಗುರುವಾರದಿಂದ ಅನಾರೋಗ್ಯ ಕಾಡುತ್ತಿತ್ತು. ತಡೆಯಲಾರದಷ್ಟು ಮೈಕೈನೋವು. ಬಳಿಕ ಪರೀಕ್ಷೆಗೆ ಒಳಪಟ್ಟೆ. ದುರದೃಷ್ಟವಶಾತ್‌ ಕೋವಿಡ್‌-19 ಸೋಂಕು ಇರುವುದು ಪತ್ತೆಯಾಗಿದೆ. ಶೀಘ್ರವೇ ಗುಣವಾಗಲು ನಿಮ್ಮೆಲ್ಲರ ಶುಭಹಾರೈಕೆಯ ಅಗತ್ಯವಿದೆ. ಇನ್ಷಾ ಅಲ್ಲಾ ಎಂದು ಅಫ್ರಿದಿ ಶನಿವಾರ ಟ್ವೀಟ್‌ ಮಾಡಿದ್ದರು.

ಅಂದಹಾಗೆ ಗಂಭೀರ್‌ ಮತ್ತು ಅಫ್ರಿದಿ ನಡುವೆ ಮಾತಿನ ಸಮರ ಹಲವು ವರ್ಷಗಳಿಂದ ನಡೆಯುತ್ತಾ ಬಂದಿದೆ. ಗಂಭೀರ್‌ ಬಗ್ಗೆ ಅಫ್ರಿದಿ ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡ ಬಳಿಕ ಇಬ್ಬರ ನಡುವಣ ಮಾತಿನ ಸಮರ ಸೋಷಿಯಲ್‌ ಮೀಡಿಯಾಗಳಲ್ಲಿ ವಿಪರೀತಕ್ಕೇರಿದೆ.

SCROLL FOR NEXT