ಕ್ರಿಕೆಟ್

ಈ ವರ್ಷ ಟಿ20 ವಿಶ್ವಕಪ್‌ ನಡೆಯುವುದು ಅನುಮಾನ: ಕ್ರಿಕೆಟ್‌ ಆಸ್ಟ್ರೇಲಿಯಾ

Vishwanath S

ಮೆಲ್ಬೋರ್ನ್‌: ಆಸ್ಟ್ರೇಲಿಯಾದಲ್ಲಿ ಕೊರೊನಾ ವೈರಸ್‌ ಸೋಂಕು ಕೊಂಚ ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ಇದೇ ವರ್ಷದ ಅಂತ್ಯಕ್ಕೆ ನಡೆಯಬೇಕಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್‌ ಗಾವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಗೆ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬಂದು ಪಂದ್ಯ ವೀಕ್ಷಿಸುವ ಸಾಧ್ಯತೆ ಇದೆ ಎಂದು ಸುದ್ದಿಯಾಗಿತ್ತು.

ಇದರ ಬೆನ್ನಲ್ಲೇ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಬೇಕಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಕೂಡ ಆಸೀಸ್‌ ನೆಲದಲ್ಲಿ ಆಯೋಜನೆ ಆಗುವ ಭರವಸೆಯೂ ಚಿಗುರಿತ್ತು. ಆದರೀಗ ಈ ಭರವಸೆ ನೀರ ಮೇಲಿನ ಗುಳ್ಳೆಯಂತೆ ಭಾಸವಾಗುತ್ತಿದೆ.

ಏಕೆಂದರೆ, ವಿಶ್ವಕಪ್‌ ಟೂರ್ನಿ ಆಯೋಜನೆ ಬಗ್ಗೆ ಮಾತನಾಡಿರುವ ಕ್ರಿಕೆಟ್‌ ಆಸ್ಟ್ರೇಲಿಯಾದ ಮುಖ್ಯಸ್ಥ ಎರಾಲ್‌ ಎಡ್ಡಿಂಗ್ಸ್‌, ಆಸೀಸ್‌ ನೆಲದಲ್ಲಿ ಈ ವರ್ಷ ಟಿ20 ವಿಶ್ವಕಪ್‌ ಟೂರ್ನಿಯ ಆಯೋಜನೆ ಅವಾಸ್ತವಿಕ ಎಂದಿದ್ದಾರೆ. ಇದರೊಂದಿಗೆ ಬಹು ನಿರೀಕ್ಷಿತ ಟೂರ್ನಿಯು 2022ಕ್ಕೆ ಮುಂದೂರುವುದು ಬಹುತೇಕ ಖಾತ್ರಿಯಾದಂತಿದೆ. ಇದು ಸಾಧ್ಯವಾದರೆ, ಅಕ್ಟೋಬರ್‌-ನವೆಂಬರ್‌ ಅವಧಿಯಲ್ಲಿ ಬಿಸಿಸಿಐಗೆ ಐಪಿಎಲ್‌ 2020 ಆಯೋಜಿಸಲು ಸಾಧ್ಯವಾಗಲಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ನಿಗದಿ ಪಡಿಸಿದ್ದಂತೆ ಅಕ್ಟೋಬರ್‌ 18ರಿಂದ ನವೆಂಬರ್‌ 15ರವರೆಗೆ 16 ರಾಷ್ಟ್ರಗಳನ್ನು ಒಳಗೊಂಡ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಇದೇ ಮೊದಲ ಬಾರಿ ಆಸ್ಟ್ರೇಲಿಯಾದಲ್ಲಿ ಆಯೋಜನೆ ಆಗಬೇಕಿತ್ತು. ಆದರೆ, ಕೋವಿಡ್‌-19 ಸೋಂಕು ಜಗತ್ತಿನಾದ್ಯಂತ 4.3 ಲಕ್ಷಕ್ಕೂ ಅಧಿಕ ಮಂದಿಯ ಬಲಿ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ನಿಗದಿಯಂತೆ ಟೂರ್ನಿ ಆಯೋಜನೆ ಅನುಮಾನವಾಗಿದೆ.

"ಅನಧಿಕೃತವಾಗಿ ಈ ವರ್ಷ ಟೂರ್ನಿಯನ್ನು ರದ್ದು ಪಡಿಸಲಾಗಿದೆ. ಅಥವಾ ಮುಂದೂಡಲ್ಪಟ್ಟಿದೆ. ಹಲವು ರಾಷ್ಟ್ರಗಳಲ್ಲಿ ಕೊರೊನಾ ವೈರಸ್‌ ಇನ್ನು ಏರಿಕೆಯಾಗುತ್ತಲಿದ್ದು, ಈ ಸಂದರ್ಭದಲ್ಲಿ 16 ರಾಷ್ಟ್ರಗಳ ತಂಡಗಳನ್ನು ಆಸ್ಟ್ರೇಲಿಯಾಕ್ಕೆ ಬರಮಾಡಿಕೊಳ್ಳುವುದು ಅವಾಸ್ತವಿಕ. ಅಸಾಧ್ಯದ ಕೆಲಸ ಕೂಡ ಎಂದು ಎರಾಲ್‌ ಎಡ್ಡಿಂಗ್ಸ್‌ ವಿಡಿಯೋ ಮೂಲಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಟಿ20 ವಿಶ್ವಕಪ್‌ ಆಯೋಜನೆ ಬಗ್ಗೆ ಐಸಿಸಿ ಜೂನ್‌ 10ರಂದು ತನ್ನ ಅಂತಿಮ ನಿರ್ಧಾರ ಪ್ರಕಟಿಸಬೇಕಿತ್ತು. ಆದರೆ, ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಇನ್ನೊಂದು ತಿಂಗಳ ಸಮಯಾವಾಕಾಶ ತೆಗೆದುಕೊಂಡಿದೆ.

SCROLL FOR NEXT