ಕ್ರಿಕೆಟ್

ಕೊರೋನಾ ಭೀತಿಯಿಂದಾಗಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಶ್ರೀಲಂಕಾ ಪ್ರವಾಸ ಮುಂದೂಡಿಕೆ: ಐಸಿಸಿ

Srinivasamurthy VN

ಢಾಕಾ: ವಿಶ್ವದ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಸೋಂಕು ಭೀತಿಯಿಂದಾಗಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಶ್ರೀಲಂಕಾ ಪ್ರವಾಸವನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಹೇಳಿದೆ.

ಈ ಬಗ್ಗೆ ಟ್ವಿಟರ್ ನಲ್ಲಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಐಸಿಸಿ, ಕೊರೋನಾ ಸಾಂಕ್ರಾಮಿಕದಿಂದಾಗಿ ಬಾಂಗ್ಲಾದೇಶದ ತಂಡದ ಶ್ರೀಲಂಕಾ ಪ್ರವಾಸ ಸರಣಿಯನ್ನು ಮುಂದೂಡಲಾಗಿದೆ ಎಂದು ಹೇಳಿದೆ. ಮೂಲಗಳ ಪ್ರಕಾರ ಜುಲೈ ತಿಂಗಳಲ್ಲಿ ಬಾಂಗ್ಲಾದೇಶ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಬೇಕಿತ್ತು. ಈ ಪ್ರವಾಸದಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು 3 ಟೆಸ್ಟ್ ನಲ್ಲಿ ಪರಸ್ಪರ ಮುಖಾಮುಖಿಯಾಗಬೇಕಿತ್ತು. ಆದರೆ ಈ ಸರಣಿಯನ್ನು ಐಸಿಸಿ ಮುಂದೂಡಿದೆ.

2018ರಲ್ಲಿ ಉಭಯ ತಂಡಗಳೂ ಢಾಕಾದಲ್ಲಿ ಮುಖಾಮುಖಿಯಾಗಿದ್ದವು. ಅಂದಿನ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಶ್ರೀಲಂಕಾ ತಂಡ 1-0 ಅಂತರದಲ್ಲಿ ಗೆದ್ದು ಬೀಗಿತ್ತು. 

ಬಾಂಗ್ಲಾ ಆಟಗಾರರಿಗೇ ಸೋಂಕು, ಐಸಿಸಿ ನಿಲುವಿಗೆ ಕಾರಣ?
ಇನ್ನು ಈ ಹಿಂದೆ ಕೊರೋನಾ ಸೋಂಕಿನ ನಡುವೆಯೂ ಶ್ರೀಲಂಕಾದಲ್ಲಿ ಸರಣಿ ನಡೆಸುವ ಉತ್ಸಾಹದಲ್ಲಿದ್ದ ಐಸಿಸಿಗೆ ಬಾಂಗ್ಲಾದೇಶ ಕ್ರಿಕೆಟಿಗರಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡ ಹಿನ್ನಲೆಯಲ್ಲಿ ಐಸಿಸಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ ಎನ್ನಲಾಗಿದೆ. ಕಳೆದ ವಾರ ಬಾಂಗ್ಲಾದೇಶದ ಪ್ರಮುಖ ಆಟಗಾರರಾದ ಮಶ್ರಫೆ ಮೊರ್ತಾಜಾ, ನಜ್ಮುಲ್ ಇಸ್ಲಾಂ ಮತ್ತು ನಫೀಸ್ ಇಕ್ಬಾಲ್ ಸೇರಿದಂತೆ ಹಲವು ಉದಯೋನ್ಮುಖ ಕ್ರಿಕೆಟಿಗರು ಕೊರೋನಾ ಸೋಂಕಿಗೆ ತುತ್ತಾಗಿದ್ದರು. 

SCROLL FOR NEXT