ಕ್ರಿಕೆಟ್

ಕೋವಿಡ್-19 ಸೋಂಕಿನಿಂದ ದೆಹಲಿಯ ಮಾಜಿ ಕ್ರಿಕೆಟಿಗ ಸಂಜಯ್ ದಾಬೋಲ್ ನಿಧನ

Srinivas Rao BV

ನವದೆಹಲಿ: ದೆಹಲಿಯ ಮಾಜಿ ಕ್ರಿಕೆಟಿಗ ಸಂಜಯ್ ದಾಬೋಲ್(52) ಕೋವಿಡ್-19 ಸೋಂಕಿನಿಂದ ಜೂ.29 ರಂದು ಮೃತಪಟ್ಟಿದ್ದಾರೆ.

ಡೆಲ್ಲಿ ಆ್ಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಸಂಜಯ್ ದಾಬೋಲ್ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ್ದು, ಕ್ರಿಕೆಟ್ ಜಗತ್ತಿನ ದುರಂತ ಘಟನೆ ಎಂದು ಹೇಳಿದೆ. "ಸಂಜಯ್ ದಾಬೋಲ್ ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ನೀಡಲಿ" ಎಂದು ಡಿಡಿಸಿಎ ಕಾರ್ಯದರ್ಶಿ ವಿನೋದ್ ತಿಹಾರ ಹೇಳಿದ್ದಾರೆ. 

ತೀವ್ರ ನ್ಯುಮೋನಿಯಾದಿಂದ ಬಳಲುತ್ತಿದ್ದ ಸಂಜಯ್ ದಾಬೋಲ್ ಗೆ ನಾಲ್ಕು ಪರೀಕ್ಷೆಗಳನ್ನು ನಡೆಸಲಾಗಿತ್ತು. ಮೂರು ವಾರಗಳ ನಂತರವಷ್ಟೇ ಅವರಿಗೆ ಕೊರೋನಾ ಸೋಂಕು ಇರುವುದು ದೃಢವಾಗಿತ್ತು.

ಸಂಜಯ್ ದಾಬೋಲ್ ಅವರ ಪರಿಸ್ಥಿತಿಯ ಬಗ್ಗೆ ಈ ಹಿಂದೆ ಮಾಹಿತಿ ನೀಡಿದ್ದ ದೆಹಲಿಯ ಕ್ರಿಕೆಟಿಗಹ್ ಮಿಥುನ್ ಮನ್ಹಾಸ್ "ನನ್ನ ಸ್ನೇಹಿತ ಸಂಜಯ್ ದಾಬೋಲ್ ಅವರು ತೀವ್ರ ನ್ಯುಮೋನಿಯಾದಿಂದ ಬಳಲುತ್ತಿದ್ದು, ಮೂರು ವಾರಗಳ ನಂತರ ಕೊರೋನಾ ಸೋಂಕು ದೃಢಪಟ್ಟಿದೆ. ವಿಳಂಬವಾಗಿ ತಿಳಿದಿದ್ದರಿಂದ ಹಾಗೂ ತೀವ್ರ ಬ್ಯಾಕ್ಟೀರಿಯಾದ ಸೋಂಕಿನಿಂದಾಗಿ ಅವರ ಶ್ವಾಸಕೋಶ ತೀವ್ರವಾಗಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ವೈದ್ಯರು ಪ್ಲಾಸ್ಮಾ ಥೆರೆಪಿಯನ್ನು ನಡೆಸಲು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕನಿಷ್ಟ 20 ದಿನಗಳ ಹಿಂದೆ ಕೋವಿಡ್-19 ರಿಂದ ಚೇತರಿಸಿಕೊಂಡ, ರಕ್ತದಾನ ಮಾಡಲು ಉತ್ಸುಕರಾಗಿರುವ ವ್ಯಕ್ತಿಯನ್ನು ಹುಡುಕುತ್ತಿದ್ದೇವೆ" ಎಂದಿದ್ದರು. 

ಭಾರತದ ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್ ಹಾಗೂ ಆಕಾಶ್ ಚೋಪ್ರಾ ಸಾಮಾಜಿಕ ಜಾಲತಾಣಗಳ ಮೂಲಕ ಸಂಜಯ್ ದಾಬೋಲ್ ಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಪತ್ನಿ ಹಾಗೂ ಇಬ್ಬರು ಪುತ್ರರನ್ನು ಸಂಜಯ್ ದಾಬೋಲ್ ಅಗಲಿದ್ದಾರೆ.

SCROLL FOR NEXT