ಕ್ರಿಕೆಟ್

ಮಹಿಳಾ ಟಿ20 ವಿಶ್ವಕಪ್ ಫೈನಲ್: ಶಫಾಲಿ-ಮಂದಾನಾ ಭಯ ಕಾಡುತಿದೆ ಎಂದ ಆಸಿಸ್ ವೇಗಿ ಮೆಗನ್‌ ಸ್ಕಟ್‌

Srinivasamurthy VN

ಮೆಲ್ಬೋರ್ನ್: ಇದೇ 8 ರಂದು ಭಾನುವಾರ ನಡೆಯುವ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ತಂಡವು ನಾಲ್ಕು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಸವಾಲನ್ನು ಎದುರಿಸಲಿದೆ.

ಗುರುವಾರ ಇಂಗ್ಲೆಂಡ್ ವಿರುದ್ಧ ನಡೆಯಬೇಕಾಗಿದ್ದ ಸೆಮಿಫೈನಲ್ ಪಂದ್ಯ ರದ್ದುಗೊಂಡ ಪರಿಣಾಮ ಗುಂಪು ಹಂತದಲ್ಲಿ ಅತಿ ಹೆಚ್ಚು ಅಂಕಗಳನ್ನು ಸಂಪಾದಿಸಿದ ಆಧಾರದಲ್ಲಿ ಭಾರತೀಯ ಮಹಿಳಾ ತಂಡವು, ನಿರಾಯಾಸವಾಗಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಈ ಮೊದಲು ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದ ಭಾರತೀಯ ಮಹಿಳಾ ತಂಡವು ಅಲ್ಲಿಂದ ಬಳಿಕ ಹಿಂತಿರುಗಿಯೇ ನೋಡಿಲ್ಲ. ತದ ಬಳಿಕ ಎ ಗುಂಪಿನಲ್ಲಿ ಆಡಿದ ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದು ಒಟ್ಟು ಎಂಟು ಅಂಕಗಳನ್ನು ಸಂಪಾದಿಸಿ ಗುಂಪಿನ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದೆ.

ಉದ್ಘಾಟನಾ ಪಂದ್ಯದಲ್ಲಿ ವಿಶ್ವ ನಂ.2 ಟಿ20 ಬೌಲರ್ ಆಸ್ಟ್ರೇಲಿಯಾದ ಮೆಗಾನ್ ಸ್ಕಟ್, ಓವರ್‌ ವೊಂದರಲ್ಲೇ ನಾಲ್ಕು ಬೌಂಡರಿ ಸೇರಿದಂತೆ 16 ರನ್ ಚಚ್ಚಿದ್ದ ಉದಯೋನ್ಮುಖ ಆಟಗಾರ್ತಿ ಶಫಾಲಿ ವರ್ಮಾ, ಕಾಂಗರೂ ಪಡೆಯನ್ನು ದಿಕ್ಕಾಪಾಲಾಗಿಸಿದ್ದರು. ಅಲ್ಲದೆ ಸ್ಮೃತಿ ಮಂಧಾನಾ ಜೊತೆಗೆ ಮೊದಲ ವಿಕೆಟ್‌ಗೆ 4.1 ಓವರ್‌ಗಳಲ್ಲೇ 41 ರನ್‌ಗಳ ಜೊತೆಯಾಟ ನೀಡಿದ್ದರು. ಮಂಧಾನಾ ಕೂಡಾ ಸಿಕ್ಸರ್‌ವೊಂದನ್ನು ಬಾರಿಸಿದ್ದರು.

ಈ ಭಯ 27ರ ಹರೆಯದ ಆಸೀಸ್ ವೇಗಿಯನ್ನು ಕಾಡುತ್ತಿದೆ. ಅಷ್ಟೇ ಯಾಕೆ ಭಾರತ ವಿರುದ್ಧ ಆಡುವುದನ್ನೇ ದ್ವೇಷಿಸುವುದಾಗಿ ಹೇಳಿಕೆ ನೀಡಿದ್ದಾರೆ. ತಮ್ಮ ದಾಳಿಯನ್ನು ಸಮರ್ಥವಾಗಿ ಎದುರಿಸುವುದನ್ನು ಭಾರತೀಯ ಆಟಗಾರ್ತಿಯರು ಕಲಿತಿದ್ದಾರೆ ಎಂದು ಕೊರಗಿದ್ದಾರೆ.

"ಭಾರತೀಯ ಆರಂಭಿಕ ಆಟಗಾರ್ತಿಯರು ನನ್ನನ್ನು ಸಮರ್ಥವಾಗಿ ಎದುರಿಸುತ್ತಾರೆ. ಇತ್ತೀಚೆಗಷ್ಟೇ ತ್ರಿಕೋನ ಸರಣಿಯಲ್ಲಿ ಶಫಾಲಿ ಹೊಡೆದ ಸಿಕ್ಸರ್ ಬಹುಶ: ನನ್ನ ವಿರುದ್ಧದ ದೊಡ್ಡ ಶಾಟ್ ಆಗಿರಬಹುದು" ಎಂದು ಸ್ಕಟ್ ನುಡಿದರು. ಹಾಗಿದ್ದರೂ ಫೈನಲ್‌ನಲ್ಲಿ ನಿಖರ ಯೋಜನೆಯೊಂದಿಗೆ ಕಣಕ್ಕಿಳಿಯುವುದಾಗಿ ಸ್ಕಟ್ ತಿಳಿಸುತ್ತಾರೆ. "ನಿಸ್ಸಂಶಯವಾಗಿಯೂ ನಮ್ಮ ತಂತ್ರಗಳನ್ನು ಮರುಪರಿಶೀಲಿಸಬೇಕಿದೆ. ಪವರ್‌ಪ್ಲೇನಲ್ಲಿ ಅವರಿಬ್ಬರ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ನನ್ನ ವಿರುದ್ಧ ಸುಲಭವಾಗಿ ರನ್ ಗಳಿಸುತ್ತಾರೆ" ಎಂದರು.

"ನಾವೀಗ ಫೈನಲ್ ಹಂತವನ್ನು ತಲುಪಿದ್ದು, ಇತ್ತೀಚೆಗಿನ ದಿನಗಳಲ್ಲಿ ಉಭಯ ದೇಶಗಳು ಅತಿ ಹೆಚ್ಚು ಕ್ರಿಕೆಟ್ ಆಡಿದ್ದೇವೆ" ಎಂಬುದನ್ನು ಉಲ್ಲೇಖಿಸಿದರು. ವಿಶ್ವಕಪ್‌ಗೂ ಮೊದಲು ನಡೆದ ತ್ರಿಕೋನ ಸರಣಿಯಲ್ಲಿ ಭಾರತವನ್ನು ಮಣಿಸಿದ್ದ ಆಸ್ಟ್ರೇಲಿಯಾ ಟ್ರೋಫಿ ಗೆದ್ದಿತ್ತು. "ಇದು ನಿಜಕ್ಕೂ ಕೆಟ್ಟ ವಿಷಯವಲ್ಲ. ಇತ್ತೀಚೆಗೆ ಸಾಕಷ್ಟು ಆಡಿರುವ ತಂಡದ ವಿರುದ್ಧವೇ ಫೈನಲ್ ಆಡುತ್ತಿರುವುದು ಒಳ್ಳೆಯ ವಿಚಾರ. ಈ ಅಂಶ ಭಾರತದ ಪಾಲಿಗೂ ಸಮಾನವಾಗಿದೆ" ಎಂದರು.

SCROLL FOR NEXT