ಕ್ರಿಕೆಟ್

ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್‌ ಆಯೋಜನೆ ಸಾಧ್ಯ: ಸುನಿಲ್ ಗವಾಸ್ಕರ್

Lingaraj Badiger

ನವದೆಹಲಿ: ಕೊರೋನಾ ವೈರಸ್‌ ಹರಡದಂತೆ ತಡೆಯಲು ಮುಂಜಾಗೃತಾ ಕ್ರಮವಾಗಿ ಶುಕ್ರವಾರ ಐಪಿಎಲ್ ಪಂದ್ಯಾವಳಿಯನ್ನು ಮುಂದೂಡಲಾಗಿದ್ದು, ಇದೇ ರೀತಿ ವಿಶ್ವದಾದ್ಯಂತ ವಿವಿಧ ಕ್ರೀಡಾಕೂಟಗಳನ್ನು ಮುಂದೂಡಲಾಗಿದೆ ಮತ್ತು ಕೆಲ ಕ್ರೀಡಾ ಚಟುವಟಿಕೆಗಳನ್ನು ರದ್ದು ಪಡಿಸಲಾಗಿದೆ. 

ಈಗ ಮುಂದೂಡಿಕೆಯಾಗಿರುವ ವಿಶ್ವದ ಐಶಾರಾಮಿ ಟಿ20 ಕ್ರಿಕೆಟ್‌ ಲೀಗ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಏಪ್ರಿಲ್ 15ರ ನಂತರ ರದ್ದಾಗುವ ಆತಂಕದಲ್ಲಿದೆ. ಆದರೆ ಐಪಿಎಲ್‌ ರದ್ದು ಮಾಡುವುದಕ್ಕಿಂತಲೂ ಮುಚ್ಚಿದ ಕ್ರೀಡಾಂಗಣದಲ್ಲಿ ಆಯೋಜಿಸುವುದೇ ವಾಸಿ ಎಂದು ಹೇಳಲಾಗುತ್ತಿದೆ. ಈಗಾಗಗಲೇ ಹಲವು ಕ್ರೀಡಾ ಕೂಟಗಳನ್ನು ಮುಚ್ಚಿದ ಕ್ರೀಡಾಂಗಣಗಳಲ್ಲಿ ನಡೆಸಲಾಗುತ್ತಿದ್ದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ನಡುವೆ ಶುಕ್ರವಾರ ನಡೆದ ಏಕದಿನ ಸರಣಿಯ ಮೊದಲ ಪಂದ್ಯವನ್ನೂ ಖಾಲಿ ಕ್ರೀಡಾಂಗಣದಲ್ಲಿ ಆಯೋಜಿಸಗಿದೆ.

ಇದರೊಂದಿಗೆ ಐಪಿಎಲ್‌ ಟೂರ್ನಿಯನ್ನೂ ಮುಚ್ಚಿದ ಕ್ರೀಡಾಂಗಣದಲ್ಲಿ ಆಯೋಜಿಸುವುದು ಒಳಿತು ಎಂದು ಭಾರತ ತಂಡದ ಮಾಜಿ ನಾಯಕ ಸುನಿಲ್‌ ಗವಾಸ್ಕರ್‌ ಅಭಿಪ್ರಾಯ ಪಟ್ಟಿದ್ದು, ಭಾರತ vs ಪಾಕಿಸ್ತಾನ ನಡುವಣ ಪಂದ್ಯವೊಂದರ ಉತ್ತಮ ಉದಾಹರಣೆ ನೀಡಿದ್ದಾರೆ.

1999ರಲ್ಲಿ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಇಂಡೊ-ಪಾಕ್ ಪಂದ್ಯವನ್ನು ಇದೇ ರೀತಿ ಮುಚ್ಚಿದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು ಎಂದು ಗವಾಸ್ಕರ್‌ ಹೇಳಿದ್ದಾರೆ. ಹೀಗಾಗಿ ಐಪಿಎಲ್‌ ಕೂಡ ಪ್ರೇಕ್ಷಕರಿಲ್ಲದೆ ನಡೆಸಲು ಸಾಧ್ಯ ಎಂದಿದ್ದಾರೆ.

"ಖಾಲಿ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆದ ಉದಾಹರಣೆಯಿದೆ. ಅಂದು ಆ ಪಂದ್ಯದಲ್ಲಿ ಸಚಿನ್ ರನ್‌ಔಟ್‌ ಆದ ಬಳಿಕ ಈಡನ್‌ ಗಾರ್ಡನ್ಸ್‌ನ ಪ್ರೇಕ್ಕರ ಗ್ಯಾಲರಿಯಲ್ಲಿ ಗಲಭೆ ಶುರುವಾಗಿತ್ತು. ಆದರೆ, ಮರುದಿನ ಆಟವನ್ನು ಮುಂದುವರಿಸಿ ಮುಚ್ಚಿದ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲಾಯಿತು. ಹೀಗಾಗಿ ಐಪಿಎಲ್ ನಡೆಸಲೇ ಬೇಕಾದರೆ ಎಲ್ಲರಿಗೂ ಒಳಿತಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು," ಎಂದು ಗವಾಸ್ಕರ್‌ ಹೇಳಿದ್ದಾರೆ.

ಇದೇ ವೇಳೆ ದಿಲ್ಲಿಯಲ್ಲಿ ಯಾವುದೇ ಐಪಿಎಲ್‌ ಪಂದ್ಯಗಳನ್ನು ಆಯೋಜಿಸಲಾಗುವುದಿಲ್ಲ ಎಂದು ದಿಲ್ಲಿಯ ಉಪ ಮುಖ್ಯಮುಂತ್ರಿ ಮನೀಶ್‌ ಸಿಸೋಡಿಯಾ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಒಟ್ಟಾರೆ ಮಾರ್ಚ್ 29ಕ್ಕೆ ಶುರುವಾಗಬೇಕಿದ್ದ ಐಪಿಎಲ್‌ ಟೂರ್ನಿ ಈಗ ಏಪ್ರಿಲ್ 15ಕ್ಕೆ ಮುಂದೂಡಿಕೆಯಾಗಿದ್ದು, ಮುಂದೆ ನಡೆಯುತ್ತೋ, ಇಲ್ಲವೋ ಎಂಬ ಆತಂಕ ಅಭಿಮಾನಿಗಳನ್ನು ಕಾಡುತ್ತಿದೆ.

SCROLL FOR NEXT