ಕ್ರಿಕೆಟ್

'ಭಾರತೀಯ ಕ್ರಿಕೆಟ್‌ನ ಕರಾಳ ದಿನಗಳು' ಧೋನಿ ಫೀನಿಷರ್‌ ಕುರಿತ ಚಾಪೆಲ್‌ ಹೇಳಿಕೆ ವಿರುದ್ಧ ಹರ್ಭಜನ್‌ ಆಕ್ರೋಶ!

Vishwanath S

ನವದೆಹಲಿ: ಟೀಂ ಇಂಡಿಯಾದ ಅತ್ಯಂತ ವಿವಾದಾತ್ಮಕ ಕೋಚ್‌ ಎಂದರೆ ಅದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಗ್ರೇಗ್‌ ಚಾಪೆಲ್‌. ಭಾರತ ತಂಡದ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರಾದ ಜಾನ್‌ ರೈಟ್ ಅವರ ಬಳಿಕ 2005ರಲ್ಲಿ ಭಾರತ ತಂಡದ ಮಾರ್ಗದರ್ಶನ ವಹಿಸಿಕೊಂಡ ಚಾಪೆಲ್ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದ್ದರು. 

ಚಾಪೆಲ್‌ ಜೊತೆಗಿನ ಜಗಳದಿಂದ ಅಂದಿನ ನಾಯಕ ಸೌರವ್‌ ಗಂಗೂಲಿ ಕೂಡ ತಂಡದಿಂದ ಹೊರಬಿದ್ದಿದ್ದರು. ಹಲವರ ಅಭಿಪ್ರಾಯದಂತೆ ಗ್ರೇಗ್‌ ಭಾರತ ತಂಡದ ಕೋಚ್‌ ಆಗಿದ್ದ ದಿನಗಳು ಭಾರತೀಯ ಕ್ರಿಕೆಟ್‌ ಇತಿಹಾಸದ ಅತ್ಯಂತ ಕರಾಳ ದಿನಗಳಾಗಿವೆ. ಆದರೆ, ಚಾಪೆಲ್‌ ಮಾತ್ರ ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ.

ಬದಲಿಗೆ ಟೀಮ್‌ ಇಂಡಿಯಾದ ಮಾಜಿ ನಾಯಕ ಎಂಎಸ್‌ ಧೋನಿ ಅವರನ್ನು ತಂಡದ ಬೆಸ್ಟ್‌ ಫಿನಿಷರ್‌ ಆಗಿ ಬೆಳೆಸಿದ್ದೇ ತಾವು ಎಂದು ಇತ್ತೀಚೆಗೆ ಪ್ಲೇರೈಟ್‌ ಫೌಂಡೇಷನ್‌ ಜೊತೆಗಿನದ ಫೇಸ್‌ಬುಕ್‌ ಚಾಟ್‌ ಕಾರ್ಯಕ್ರಮವೊಂದರಲ್ಲಿ ಚಾಪೆಲ್‌ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ತಾವು ಕಂಡ ಅತ್ಯಂತ ಬಲಿಷ್ಠ ಬ್ಯಾಟ್ಸ್‌ಮನ್‌ ಧೋನಿ ಎಂದು ಗುಣಗಾನ ಮಾಡಿದ್ದರು.

2005-2007ರ ವರೆಗೆ ಎರಡು ವರ್ಷ ಕಾಲ ಟೀಮ್‌ ಇಂಡಿಯಾ ಕೋಚ್‌ ಆಗಿದ್ದ ಚಾಪೆಲ್‌, ಈ ಅವಧಿಯಲ್ಲಿ ಧೋನಿಗೆ ಭಾರತ ತಂಡಕ್ಕೆ ಪಂದ್ಯಗಳನ್ನು ಗೆದ್ದುಕೊಡುವಂತೆ ಸವಾಲು ಹಾಕಿದ್ದರಂತೆ ಸಿಕ್ಸರ್‌ಗಳನ್ನು ಹೊಡೆಯುತ್ತಿದ್ದ ಧೋನಿಗೆ, ನೆಲದಲ್ಲೇ ಆಡುವಂತೆ ಹೇಳಿ ಶ್ರೇಷ್ಠ ಫಿನಿಷರ್‌ ಆಗುವಂತೆ ಮಾಡಿದ್ದಾಗಿ ಚಾಪೆಲ್‌ ಹೇಳಿಕೊಂಡಿದ್ದಾರೆ.

ಇದೀಗ ಚಾಪೆಲ್‌ ಹೇಳಿಕೆಗೆ ದಿಟ್ಟ ಉತ್ತರ ನೀಡಿರುವ ಟರ್ಬನೇಟರ್‌ ಖ್ಯಾತಿಯ ಆಫ್‌ಸ್ಪಿನ್ನರ್‌ ಹರ್ಭಜನ್‌ ಸಿಂಗ್‌, ಟ್ವಿಟರ್‌ ಮೂಲಕ ಟೀಕಾ ಪ್ರಹಾರ ನಡೆಸಿದ್ದಾರೆ. "ಚೆಂಡನ್ನು ಕ್ರೀಡಾಂಗಣವೇ ದಾಟಿ ಹೋಗುವತೆ ಬಾರಿಸುತ್ತಿದ್ದ ಕಾರಣಕ್ಕೆ ಕೋಚ್‌ ಧೋನಿಗೆ ನೆಲದಲ್ಲೇ ಆಡು ಎಂಬ ಸಲಹೆ ನೀಡಿದ್ದರು. ಏಕೆಂದರೆ ಅಲ್ಲಿ ಕೋಚ್‌ನ ಆಟವೇ ಬೇರೆಯದ್ದಾಗಿತ್ತು. #ಭಾರತೀಯ ಕ್ರಿಕೆಟ್‌ನ ಕರಾಳ ದಿನಗಳು," ಎಂದು ಹ್ಯಾಶ್‌ ಟ್ಯಾಗ್‌ ಮೂಲಕ ಭಜ್ಜಿ ಟ್ವೀಟ್‌ ಮಾಡಿದ್ದಾರೆ.

SCROLL FOR NEXT