ಕ್ರಿಕೆಟ್

ಜುಲೈನಲ್ಲಿ ಕ್ರಿಕೆಟ್‌ ಸರಣಿ ಆಯೋಜಿಸುವಂತೆ ಬಿಸಿಸಿಐಗೆ ಲಂಕಾ ಮನವಿ

Lingaraj Badiger

ನವದೆಹಲಿ: ಕೊವಿಡ್-19‌ ಭೀತಿ ಹಿನ್ನೆಲೆಯಲ್ಲಿ ಐಪಿಎಲ್ ಸೇರಿದಂತೆ ಎಲ್ಲ ಕ್ರಿಕೆಟ್ ಚಟುವಟಿಕೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಆದರೀಗ, ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್ಎಲ್ ಸಿ) ಜುಲೈನಲ್ಲಿ ಭಾರತ ವಿರುದ್ಧ ದ್ವಿಪಕ್ಷೀಯ ಸರಣಿ ಆಯೋಜಿಸುವಂತೆ ಬಿಸಿಸಿಐಗೆ ಮನವಿ ಮಾಡಿದೆ.

ಜುಲೈನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಣ ದ್ವಿಪಕ್ಷೀಯ ಕ್ರಿಕೆಟ್‌ ಸರಣಿ ಆಯೋಜನೆ ಸಂಬಂಧ ಬಿಸಿಸಿಐಗೆ ಶ್ರೀಲಂಕಾ ಕ್ರಿಕೆಟ್‌ ಈಗಾಗಲೇ ಇ-ಮೇಲ್‌ ಕಳುಹಿಸಿದೆ.

ಪೂರ್ವ ನಿಗದಿಯಂತೆ ಭಾರತ, ದ್ವೀಪರಾಷ್ಟ್ರದ ವಿರುದ್ಧ ತಲಾ 3 ಪಂದ್ಯಗಳ ಏಕದಿನ ಮತ್ತು ಟಿ20 ಕ್ರಿಕೆಟ್ ಪಂದ್ಯಗಳ ಸರಣಿಗಳನ್ನು ಆಡಬೇಕಿದೆ. ಆದರೆ ಕೊರೋನಾ ವೈರಸು ಹತೋಟಿಗೆ ಬಾರದಿರುವ ಹಿನ್ನೆಲೆಯಲ್ಲಿ ಇಂಡೊ-ಲಂಕಾ ಕ್ರಿಕೆಟ್‌ ಸರಣಿ ನಡೆಯುವುದು ಕೂಡ ಅನುಮಾನವಾಗಿದೆ. 

ಒಂದು ವೇಳೆ ಸರಣಿ ನಡೆಸುವುದೇ ಆದರೆ ಖಾಲಿ ಕ್ರೀಡಾಂಗಣಗಳಲ್ಲಿ ಆಯೋಜಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಆಟಗಾರರನ್ನು ಅನಿವಾರ್ಯವಾಗಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಈ ಮಧ್ಯೆ ಸರಣಿ ಆಡಲು ಶ್ರೀಲಂಕಾ ಕ್ರಿಕೆಟ್‌ ತಂಡ ಸಿದ್ಧವಿದ್ದು, ಬಿಸಿಸಿಐನ ಪ್ರತಿಕ್ರಿಯೆಗೆ ಎದುರು ನೋಡುತ್ತಿರುವುದಾಗಿ ಎಸ್ಎಲ್ ಸಿ ಹೇಳಿರುವುದಾಗಿ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

SCROLL FOR NEXT