ಕ್ರಿಕೆಟ್

ಸಚಿನ್ ತೆಂಡೂಲ್ಕರ್ 190 ರನ್ ಗೆ ಔಟ್ ಆಗಿದ್ದರು.. ಆದರೆ ಅಂಪೈರ್ ಪ್ರೇಕ್ಷಕರರಿಗೆ ಹೆದರಿ ಔಟ್ ಕೊಡಲಿಲ್ಲ; ಡೇಲ್ ಸ್ಟೇಯ್ನ್

Srinivasamurthy VN

ನವದೆಹಲಿ: ಭಾರತದ ಸಚಿನ್ ತೆಂಡೂಲ್ಕರ್ ಮೊಟ್ಟ ಮೊದಲ ದ್ವಿಶತಕ ಸಿಡಿಸಿದ್ದ ಪಂದ್ಯದಲ್ಲಿ ಅವರು 190 ರನ್ ಗಳಿಗೆ ಔಟ್ ಆಗಿದ್ದರು. ಆದರೆ ಅಂಪೈರ್ ಪ್ರೇಕ್ಷಕರ ಕೂಗಾಟಕ್ಕೆ ಹೆದರಿ ಔಟ್ ಕೊಡಲಿಲ್ಲ ಎಂದು ದಕ್ಷಿಣ ಆಫ್ರಿಕಾ ತಂಡದ ವೇಗಿ ಡೇಲ್ ಸ್ಟೇಯ್ನ್ ಹೇಳಿದ್ದಾರೆ.

ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್ ಕಾರ್ಯಕ್ರಮದಲ್ಲಿ ಜೇಮ್ಸ್ ಆಂಡರ್ಸನ್ ಅವರೊಂದಿಗೆ ಮಾತನಾಡಿದ ಸ್ಟೇಯ್ನ್, '2010 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ತೆಂಡೂಲ್ಕರ್ ತಮ್ಮ ಚೊಚ್ಚಲ ಏಕದಿನ ದ್ವಿಶತಕ ಬಾರಿಸಿದರು.  ಆದರೆ ಅವರು 190 ರನ್ ಗಳಿಸಿದ ಸಂದರ್ಭದಲ್ಲಿ ಔಟ್ ಆಗಿದ್ದರೂ  ಅಂಪೈರ್ ಔಟ್ ಕೊಡಲಿಲ್ಲ ಎಂದು ಹೇಳಿದ್ದಾರೆ.

2010ರ ಭಾರತದ ಪ್ರವಾಸದ ವೇಳೆ ಗ್ವಾಲಿಯರ್ ನಲ್ಲಿ ನಡೆದ ಪಂದ್ಯ ನನಗೆ ಇನ್ನೂ ನೆನಪಿದೆ. ಆ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಮೊಟ್ಟ ಮೊದಲ ಏಕದಿನ ದ್ವಿಶತಕ ಗಳಿಸಿದ್ದರು. ಆದರೆ ಆ ಪಂದ್ಯದಲ್ಲಿ 190 ರನ್ ಗಳಿಸಿ ಸಚಿನ್ ಔಟ್ ಆಗಿದ್ದರು. ನಾನು ಎಸೆದ ಎಲ್ ಬಿ ಬಲೆಗೆ ಸಚಿನ್  ಬಿದಿದ್ದರು. ಈ ವಿಚಾರ ಅಂಪೈರ್ ಇಯಾನ್ ಗೌಲ್ಡ್ ಗೂ ಕೂಡ ಗೊತ್ತಿತ್ತು. ಆದರೆ ಪ್ರೇಕ್ಷಕರ ಕೂಗಾಟ ಮತ್ತು ಚೀರಾಟಕ್ಕೆ ಹೆದರಿ ಅವರು ನಾಟೌಟ್ ನೀಡಿದ್ದರು. ಪಂದ್ಯದ ಬಳಿಕ ನಾನು ನೇರವಾಗಿ ಅಂಪೈರ್ ಗೌಲ್ಡ್ ಬಳಿ ಹೋಗಿ, 'ನೀವು ಯಾಕೆ ಔಟ್ ಕೊಡಲಿಲ್ಲ ಎಂದು ಕೇಳಿದಾಗ, ಅದಕ್ಕೆ  ಅವರು ಸುತ್ತಲೂ ನೋಡಿ ನಾನು ಔಟ್ ಕೊಟ್ಟರೆ ನಾನು ಹೋಟೆಲ್‌ಗೆ ಹಿಂತಿರುಗುವುದಿಲ್ಲ' ಎಂದು ಹೇಳಿದರು ಎಂದು ಸ್ಟೇಯ್ನ್ ಆ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. 

ಫೆಬ್ರವರಿ 24 ರಂದು ಗ್ವಾಲಿಯರ್‌ನಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಸಚಿನ್ ಕ್ರಿಕೆಟ್ ಇತಿಹಾಸದಲ್ಲಿ ಏಕದಿನ ದ್ವಿಶತಕ ಗಳಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 

SCROLL FOR NEXT