ಕ್ರಿಕೆಟ್

ಲಾಕ್ ಡೌನ್ ಅವಧಿಯಲ್ಲಿ ಗುತ್ತಿಗೆರಹಿತ, ಅಂಡರ್ 19 ಆಟಗಾರರಿಗೆ ಮಾನಸಿಕ ಆರೋಗ್ಯ ತರಬೇತಿ: ರಾಹುಲ್ ದ್ರಾವಿಡ್

Srinivasamurthy VN

ನವದೆಹಲಿ: ಗುತ್ತಿಗೆ ರಹಿತ ಮತ್ತು 19 ವರ್ಷದೊಳಗಿನ ಕ್ರಿಕೆಟಿಗರ ಮಾನಸಿಕ ಸಮಸ್ಯೆಗಳನ್ನು ವೃತ್ತಿಪರರ ಸಹಾಯದ ಮೂಲಕ ಪರಿಹರಿಸಲಾಗಿದೆ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾವಿಡ್ ಹೇಳಿದ್ದಾರೆ. 

ರಾಜಸ್ಥಾನ ರಾಯಲ್ಸ್ ತಂಡದ ವೆಬಿನಾರ್ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡು ಮಾತನಾಡಿದ ರಾಹುಲ್ ದ್ರಾವಿಡ್, ಲಾಕ್‌ಡೌನ್‌ ಸಮಯವು ಕ್ರಿಕೆಟಿಗರಿಗೆ ಅನಿಶ್ಚಿತತೆಯ ಅವಧಿಯಾಗಿದ್ದು, ಅವರ ಮೇಲೆ ಮಾನಸಿಕವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ.  ಹೀಗಾಗಿ ಗುತ್ತಿಗೆ ರಹಿತ ಮತ್ತು 19 ವರ್ಷದೊಳಗಿನ ಕ್ರಿಕೆಟಿಗರಿಗೆ ಮಾನಸಿಕ ಆರೋಗ್ಯ ತರಬೇತಿ ನೀಡಿ ಅವರ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಹೇಳಿದರು.

'ಇತ್ತೀಚಿನ ದಿನಗಳಲ್ಲಿ ಯುವ ಕ್ರಿಕೆಟಿಗರು ಎದುರಿಸುತ್ತಿರುವ ಮಾನಸಿಕ ತೊಂದರೆಗಳನ್ನು ನಿಭಾಯಿಸುವ ಪರಿಣಿತಿ ನಮಗಿಲ್ಲವೆಂದು ಒಬ್ಬ ಮಾಜಿ ಕ್ರಿಕೆಟಿಗ ಹಾಗೂ ತರಬೇತುದಾರನಾಗಿ ಒಪ್ಪಿಕೊಳ್ಳುತ್ತೇನೆ. ಆ ಕಾರಣ, ವೃತ್ತಿಪರರನ್ನು ಸಂಪರ್ಕಿಸಲು ಗುತ್ತಿಗೆ ರಹಿತ ಮತ್ತು 19  ವರ್ಷದೊಳಗಿನ ಕ್ರಿಕೆಟ್‌ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ಮಾನಸಿಕ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುವುದು ಈ ಹಿಂದೆ ಕಳಂಕವೆಂಬಂತೆ ನೋಡಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಇಂದು ಒತ್ತಡದ ವಾತಾವರಣವಿದ್ದು, ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಚರ್ಚೆಗಳು  ನಡೆಯುತ್ತಿರುವುದು ಉತ್ತಮ ಬೆಳವಣಿಗೆ.

ಇದೇ ವೇಳೆ ಕ್ರಿಕೆಟ್ ಮತ್ತು ಯುವ ಕ್ರಿಕೆಟಿಗರ ಮನಃಸ್ಥಿತಿ ಕುರಿತು ಮಾತನಾಡಿದ ದ್ರಾವಿಡ್ ಈಗಿನ ಯುವ ಕ್ರಿಕೆಟಿಗರು ಭಾರತ ತಂಡಕ್ಕೆ ಆಯ್ಕೆಯಾಗಲೇಬೇಕು ಎಂಬ ಒತ್ತಡದೊಂದಿಗೇ ಕ್ರಿಕೆಟ್ ಆರಂಭಿಸುತ್ತಾರೆ. ನನ್ನನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ ನಾನು ಪ್ರಥಮ ದರ್ಜೆ  ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದು 17ನೇ ವರ್ಷದಲ್ಲಿ ಆದರೆ ತಂಡಕ್ಕೆ ಆಯ್ಕೆಯಾಗಲು 5 ವರ್ಷಗಳ ಕಾಲ ಕಾಯಬೇಕಾಯಿತು. ಈ ಕಾಯುವಿಕೆಯ ಒತ್ತಡವನ್ನು ಈಗಿನ ಕ್ರಿಕೆಟಿಗರು ನಿಭಾಯಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

SCROLL FOR NEXT