ಕ್ರಿಕೆಟ್

ಕೋವಿಡ್-19 ಸಾಂಕ್ರಾಮಿಕದ ನಡುವೆ ಬಯೋ ಬಬಲ್ ನಲ್ಲಿ ಹೆಚ್ಚು ಕಾಲ ಉಳಿಯುವುದು ಕಷ್ಟ: ವಿರಾಟ್ ಕೊಹ್ಲಿ

Srinivasamurthy VN

ದುಬೈ: ಕೋವಿಡ್-19 ಸಾಂಕ್ರಾಮಿಕದ ನಡುವೆಯೇ ಸತತ ಸರಣಿ ಆಡುವಾಗ ಬಯೋ ಬಬಲ್ ನೊಳಗೆ ಹೆಚ್ಚು ಕಾಲ ಉಳಿಯುವುದು ಕಷ್ಟ ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಹಾಲಿ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಐಪಿಎಲ್ ಬಳಿಕ ಆಸಿಸ್ ಸರಣಿಯಲ್ಲಿ ಪಾಲ್ಗೊಳ್ಳಬೇಕಿದೆ. ಕೋವಿಡ್ ಸಾಂಕ್ರಾಮಿಕದ ನಡುವೆ ಸತತ ಸರಣಿ ಹಿನ್ನಲೆಯಲ್ಲಿ ತಮ್ಮದೇ ಆರ್ ಸಿಬಿ ತಂಡದ ಯೂಟ್ಯೂಬ್ ಚಾನೆಲ್ ನೊಂದಿಗೆ ಮಾತನಾಡಿರುವ ವಿರಾಟ್ ಕೊಹ್ಲಿ,  'ಇಂಥಹ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚು ಕಾಲ ಬಯೋ ಬಬಲ್ ಒಳಗೆ ಉಳಿದುಕೊಳ್ಳೋದು ಕೆಲವೊಮ್ಮೆ ಕಷ್ಟವಾಗುತ್ತದೆ. ಅದ್ಭುತ ವ್ಯಕ್ತಿಗಳು ಜೊತೆಗಿದ್ದಾಗ ಬಯೋ ಬಬಲ್ ಒಳಗಿರೋದು ಕಷ್ಟವಲ್ಲ. ಬಯೋ ಬಬಲ್‌ನ ಪ್ರತೀ ಭಾಗವೂ ನಿಜಕ್ಕೂ ತುಂಬಾ ಚೆನ್ನಾಗಿದೆ. ಇದೇ ಕಾರಣಕ್ಕೆ ನಾವೆಲ್ಲರೂ ಇಲ್ಲಿ  ಎಂಜಾಯ್ ಮಾಡುತ್ತಿದ್ದೇವೆ. ಆದರೆ ಹೆಚ್ಚು ಕಾಲ ಬಯೋ ಬಬಲ್ ಒಳಗೆ ಉಳಿಯೋದು ಕೊಂಚ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

'ಐಪಿಎಲ್ ಬಳಿಕ ಭಾರತ ತಂಡ ಆಸಿಸ್ ಪ್ರವಾಸದಲ್ಲಿ ಪಾಲ್ಗೊಳ್ಳಲಿದೆ. ಆಸ್ಟ್ರೇಲಿಯಾ ಪ್ರವಾಸವು ಹೊಸ ವರ್ಷಕ್ಕೆ ವಿಸ್ತರಿಸಿದ್ದು, ಆಟಗಾರರು ನಾಲ್ಕು ತಿಂಗಳಿಗಿಂತ ಹೆಚ್ಚು ಕಾಲ ಹೊರಗಿನ ಪ್ರಪಂಚದೊಂದಿಗೆ ಕಡಿಮೆ ಸಂಪರ್ಕದೊಂದಿಗೆ ಕುಟುಂಬದಿಂದ ದೂರ ಉಳಿದಿದ್ದಾರೆ. ಸಾಂಕ್ರಾಮಿಕ ರೋಗದ ಮಧ್ಯೆ ಬಯೋ  ಬೈಬಲ್ ನಲ್ಲಿ ಕ್ರಿಕೆಟ್ ಆಯೋಜಿಸಲಾಗುತ್ತಿದೆ. ಸದ್ಯಕ್ಕೆ ಈ ಸ್ಥಿತಿ ಬದಲಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸತತ ಸರಣಿ ಆಟಗಾರರ ಮಾನಸಿಕ ಆಯಾಸಕ್ಕೆ ಕಾರಣವಾಗುತ್ತಿದೆ. ಸರಣಿ ಯಾವುದೇ ಇರಲಿ ದಿನದಂತ್ಯಕ್ಕೆ ಆಟಗಾರರು ಉತ್ತಮ ಮನಃಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ.  

ಆಸ್ಟ್ರೇಲಿಯಾ ಸರಣಿ ಬಳಿಕ ಭಾರತ ತಂಡ ಇಂಗ್ಲೆಂಡ್ ಸರಣಿಯಲ್ಲಿ ಪಾಲ್ಗೊಳ್ಳಲಿದ್ದು, ಮೂರು ಮಾದರಿಯ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳುವಾಗ ವಿವಿಧ ರೀತಿಯ ಬಯೋ ಬಬಲ್ ನಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ಕುಟುಂಬಸ್ಥರೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಸ್ಯಾಮ್ ಕರನ್, ಭವಿಷ್ಯದ ಕ್ರಿಕೆಟ್ ಸರಣಿಗಳತ್ತ ನೋಡಿದರೆ, ದೊಡ್ಡ ವೇಳಾಪಟ್ಟಿ ನಮ್ಮ ಮುಂದಿದೆ. ಎಲ್ಲ ಮಾದರಿಯ ಕ್ರಿಕೆಟ್ ನ ಆಟಗಾರರೂ ಎಲ್ಲ ಮಾದರಿಯ ಪರಿಸ್ಥಿತಿಗೆ ಒಗ್ಗಿ ಆಡಲಿದ್ದಾರೆ ಎಂದು ಹೇಳಿದ್ದಾರೆ.

SCROLL FOR NEXT