ಕ್ರಿಕೆಟ್

ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಕ್ರೆಕೆಟ್ ಸೇರಿಸಬೇಕು: ರಾಹುಲ್ ದ್ರಾವಿಡ್

Srinivasamurthy VN

ನವದೆಹಲಿ: ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಅನ್ನೂ ಕೂಡ ಸೇರ್ಪಡೆ ಮಾಡಬೇಕು ಎಂದು ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಆಗ್ರಹಿಸಿದ್ದಾರೆ.

ಮನೋಜ್‌ ಬಾದಲ್‌ ಮತ್ತು ಸೈಮನ್‌ ಹ್ಯೂಸ್‌ ಅವರ ‘ಎ ನ್ಯೂ ಇನಿಂಗ್ಸ್‌’ ಪುಸ್ತಕವನ್ನು ವರ್ಚುವಲ್ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ದ್ರಾವಿಡ್. 'ಟಿ20 ಕ್ರಿಕೆಟ್‌ ಮುಂಬರುವ ಒಲಿಂಪಿಕ್ಸ್‌ನ ಭಾಗವಾಗಬೇಕು. ಟಿ20 ಕ್ರಿಕೆಟ್‌ ಅನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸುವುದರಿಂದ ಈ ಕ್ರೀಡೆಗೆ  ಒಳಿತಾಗುತ್ತದೆ ಎಂದು ನನಗನಿಸುತ್ತದೆ. ಏಕೆಂದರೆ, 75 ದೇಶಗಳಲ್ಲಿ ಕ್ರಿಕೆಟ್‌ ಆಡಲಾಗುತ್ತದೆ. ಖಂಡಿತ ನಾನೂ ಟಿ20 ಮಾದರಿಯ ಬೆಳವಣಿಗೆಯ ಪರ ಇದ್ದೇನೆ ಎದು ಹೇಳಿದ್ದಾರೆ. 

ಅಂತೆಯೇ ಇದು (ಟಿ20 ಕ್ರಿಕೆಟ್‌ ಅನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸುವುದು) ನಿಸ್ಸಂಶಯವಾಗಿ ಸಾಕಷ್ಟು ಸವಾಲುಗಳನ್ನು ಹೊಂದಿದೆ. ಇದು ಯಶಸ್ವಿಯಾಗಬೇಕಾದರೆ ಸಾಕಷ್ಟು ಸೌಲಭ್ಯಗಳ ಅಗತ್ಯವಿದೆ. ಒಲಿಂಪಿಕ್ಸ್‌‌ ಕ್ರೀಡಾಕೂಟವು ಕ್ರಿಕೆಟ್ ಆಡದ ದೇಶಗಳಲ್ಲಿಯೂ ನಡೆಯುತ್ತದೆ. ಆದರೆ, ಸೌಲಭ್ಯಗಳನ್ನು  ಪಡೆದುಕೊಂಡರೆ ಮತ್ತು ವೇಳಾಪಟ್ಟಿ ಹೊಂದಾಣಿಕೆ ಮಾಡಲು ಸಾಧ್ಯವಾದರೆ ಕ್ರಿಕೆಟ್‌ ಅನ್ನು ಒಲಿಂಪಿಕ್ಸ್‌ಗೆ ಸೇರಿಸುವ ಪ್ರಯತ್ನ ಮಾಡಬೇಕು. ಹೌದು ಇದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು. ಆದರೆ, ಏಕೆ ಸಾಧ್ಯವಾಗಬಾರದು ಎಂದು ಹೇಳಿದ್ದಾರೆ.

ಇನ್ನು ಟಿ20 ಕ್ರಿಕೆಟ್‌ ಅನ್ನು ಒಲಿಂಪಿಕ್ಸ್‌ನ ಭಾಗವಾಗಿಸುವ ಸಂಬಂಧ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯ (ಐಸಿಸಿ) 2018ರಲ್ಲಿ ಮಾತುಕತೆ, ಸಮೀಕ್ಷೆ ನಡೆಸಿತ್ತು. ಸಮೀಕ್ಷೆ ವೇಳೆ ಶೇ.87ರಷ್ಟು ಅಭಿಮಾನಿಗಳು ಕ್ರಿಕೆಟ್‌ ಅನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸುವುದನ್ನು ಬಯಸಿದ್ದರು. ಆದಾಗ್ಯೂ ಐಸಿಸಿಯ ಅತ್ಯಂತ  ಶ್ರೀಮಂತ ಮಂಡಳಿಯಾಗಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವಿಚಾರದಲ್ಲಿ ಅಷ್ಟೇನು ಉತ್ಸುಕವಾಗಿರಲಿಲ್ಲ. 2010 ಮತ್ತು 2014ರ ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ಅನ್ನು ಸೇರಿಸಲಾಗಿತ್ತಾದರೂ, ಬಿಸಿಸಿಐ ತಂಡ ಕಳುಹಿಸಿರಲಿಲ್ಲ. ಇದು ಕ್ರಿಕೆಟ್ ಅನ್ನು ಒಲಿಂಪಿಕ್ಸ್  ಕ್ರೀಡಾಕೂಟಕ್ಕೆ ಸೇರಿಸಲು ಹಿನ್ನಡೆಯಾಯಿತು ಎನ್ನಲಾಗಿದೆ.

SCROLL FOR NEXT