ಕ್ರಿಕೆಟ್

ಏಕದಿನ ಕ್ರಿಕೆಟ್‌ನಲ್ಲಿ ವಿಶಿಷ್ಠ ದಾಖಲೆಯ ಸನಿಹದಲ್ಲಿ ವಿರಾಟ್‌ ಕೊಹ್ಲಿ

Lingaraj Badiger

ನವದೆಹಲಿ: ಕಳೆದ 6-7 ವರ್ಷಗಳಿಂದ ರನ್‌ ಹೊಳೆ ಹರಿಸುತ್ತಿರುವ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಟೆಸ್ಟ್‌, ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಕೊಹ್ಲಿ ಕೂಡ ಒಬ್ಬರಾಗಿದ್ದಾರೆ.

ಓಡಿಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿರುವ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನು ಮುರಿಯಲು ವಿರಾಟ್‌ ಕೊಹ್ಲಿ ಇನ್ನೂ ಕೇವಲ ಆರು ಶತಕಗಳು ಮಾತ್ರ ಅಗತ್ಯವಾಗಿದೆ. 248 ಪಂದ್ಯಗಳಾಡಿರುವ ಟೀಮ್‌ ಇಂಡಿಯಾ ನಾಯಕ 59.3ರ ಸರಾಸರಿಯಲ್ಲಿ 43 ಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೆ, ಏಕದಿನ ಕ್ರಿಕೆಟ್‌ನಲ್ಲಿ 12,000 ರನ್‌ಗಳನ್ನು ಪೂರೈಸಲು ಇನ್ನು ಕೇವಲ 133 ರನ್‌ಗಳು ಮಾತ್ರ ಅಗತ್ಯವಿದೆ.

ಇದೀಗ ಶುಕ್ರವಾರದಿಂದ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವರು ಈ ಮೈಲಿಗಲ್ಲು ಸ್ಥಾಪಿಸುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಈ ಮೈಲಿಗಲ್ಲು ಸ್ಥಾಪಿಸಿದರೆ, ಈ ಸಾಧನೆ ಮಾಡಿದ ಆರನೇ ಬ್ಯಾಟ್ಸ್‌ಮನ್‌ ಎಂಬ ಕೀರ್ತಿಗೆ ಟೀಮ್‌ ಇಂಡಿಯಾ ನಾಯಕ ಭಾಜನರಾಗಲಿದ್ದಾರೆ ಹಾಗೂ 300ಕ್ಕಿಂತ ಕಡಿಮೆ ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳಲಿದ್ದಾರೆ. ನಾಳೆ ಸಿಡ್ನಿಯಲ್ಲಿ ಭಾರತ ತಂಡ ಮೊದಲನೇ ಓಡಿಐ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾ ನಾಯಕ ಅಡಿಲೇಡ್‌ ಓವಲ್‌ನಲ್ಲಿ ನಡೆಯುವ ಮೊದಲನೇ ಟೆಸ್ಟ್ ಪಂದ್ಯದ ಬಳಿಕ ತವರಿಗೆ ಮರಳಲಿದ್ದಾರೆ. ಆ ಮೂಲಕ ಇನ್ನುಳಿದ ಮೂರು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಅದರಂತೆ ಈ ಹಿಂದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾರತೀಯ ನಾಯಕ ಕೊಹ್ಲಿಗೆ ಪಿತೃತ್ವ ರಜೆ ನೀಡಿದೆ ಎಂದು ದೃಢಪಡಿಸಿತ್ತು. ವಿರಾಟ್‌ ಕೊಹ್ಲಿ ಅನುಪಸ್ಥಿತಿ ಟೆಸ್ಟ್ ಸರಣಿಯಲ್ಲಿ ಟೀಮ್‌ ಇಂಡಿಯಾಗೆ ಭಾರಿ ನಷ್ಟವಾಗಲಿದೆ ಎಂದು ಹಲವು ಕ್ರಿಕೆಟ್‌ ದಿಗ್ಗಜರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

SCROLL FOR NEXT