ಕ್ರಿಕೆಟ್

ಆಸ್ಟ್ರೇಲಿಯಾ ಪ್ರವಾಸ: ರೋಹಿತ್ ಶರ್ಮಾ ಕೈ ಬಿಟ್ಟ ಕುರಿತು ಬಿಸಿಸಿಐ ಸ್ಪಷ್ಟನೆ

Srinivasamurthy VN

0ಆಸ್ಟ್ರೇಲಿಯಾ ಪ್ರವಾಸದಿಂದ ರೋಹಿತ್ ಶರ್ಮಾ ಅವರನ್ನು ಕೈ ಬಿಟ್ಟ ಕುರಿತು ನಾಯಕ ವಿರಾಟ್ ಕೊಹ್ಲಿ ನೀಡಿದ್ದ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ, ರೋಹಿತ್ ತಮ್ಮ ಅನಾರೋಗ್ಯ ಪೀಡಿತ ತಂದೆಯನ್ನು ನೋಡುವ ಸಲುವಾಗಿ ಮುಂಬೈ ತೆರಳಿದ್ದಾರೆ ಎಂದು ಸ್ಪಷ್ಟನೆ  ನೀಡಿದೆ.

ಈ ಹಿಂದೆ ತಂಡದ ಆಯ್ಕೆ ಕುರಿತು ಮಾತನಾಡಿದ್ದ ವಿರಾಟ್ ಕೊಹ್ಲಿ, ಆಟಗಾರರ ಆಯ್ಕೆ ಕುರಿತು ಸ್ಪಷ್ಟತೆ ಇಲ್ಲ ಎಂದು ಹೇಳಿದ್ದರು. ಕೊಹ್ಲಿ ಅವರ ಈ ಮಾತು ಕ್ರಿಕೆಟ್ ವಲಯದಲ್ಲಿ ಸಾಕಷ್ಚು ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಈ ಎಲ್ಲ ಪ್ರಶ್ನೆಗಳಿಗೆ ಬಿಸಿಸಿಐ ಉತ್ತರ ನೀಡಿದ್ದು, ಅನಾರೋಗ್ಯ  ಪೀಡಿತ ತಂದೆಯನ್ನು ನೋಡಿಕೊಳ್ಳಲು ರೋಹಿತ್ ಮುಂಬೈನಲ್ಲಿರಬೇಕು ಎಂದು ಹೇಳಿದೆ.

ಹಿರಿಯ ಕ್ರೀಡಾಪತ್ರಕರ್ತ ಬೊರಿಯಾ ಮಜುಮ್ದಾರ್ ಪ್ರಕಾರ, ಐಪಿಎಲ್ ಬಳಿಕ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಯುಎಇಯಿಂದ ಭಾರತಕ್ಕೆ ವಾಪಸ್ಸಾಗಿದ್ದು ಫಿಟ್ನೆಸ್ ಕಾರಣಕ್ಕಾಗಿ ಅಲ್ಲ, ಬದಲಿಗೆ ರೋಹಿತ್ ತಂದೆಗೆ ಕೊರೊನಾವೈರಸ್ ಸೋಂಕು ತಗುಲಿತ್ತು. ಇದೇ ಕಾರಣಕ್ಕೆ  ಶರ್ಮಾ ಭಾರತಕ್ಕೆ ಬಂದಿದ್ದು. ಇದೀಗ ಅವರ ತಂದೆ ಚೇತರಿಸಿಕೊಂಡಿದ್ದಾರೆ. ಹೀಗಾಗಿ ರೋಹಿತ್ ಎನ್ ಸಿಎ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ರೋಹಿತ್‌ಗೆ ಟೆಸ್ಟ್‌ನಲ್ಲಿ ಆಡೋದು ಬೇಡವಾಗಿದ್ದರೆ ಐಪಿಎಲ್ ಗೆಲುವನ್ನು ಮಡದಿ, ಕುಟುಂಬದ ಜೊತೆಗಿದ್ದು ಸಂಭ್ರಮಿಸಬಹುದಿತ್ತು. ಎನ್‌ಸಿಎಗೆ  ಪ್ರಯಾಣಿಸುವ ಅಗತ್ಯ ಇರಲಿಲ್ಲ,' ಎಂದು ಬೊರಿಯಾ ಹೇಳಿದ್ದಾರೆ. 

ಅಂತೆಯೇ ಡಿಸೆಂಬರ್ 11ರಂದು ರೋಹಿತ್ ಶರ್ಮಾ ಫಿಟ್ನೆಸ್ ಪರೀಕ್ಷೆಗೊಳಪಡಲಿದ್ದಾರೆ. ಅದಕ್ಕೂ ಮುನ್ನ ಎನ್ ಸಿಎನಲ್ಲಿ ತರಬೇತಿ ನಡೆಸಲಿದ್ದಾರೆ ಎಂದು ಹೇಳಿದೆ. ರೋಹಿತ್ ಶರ್ಮಾ ಮಾತ್ರವಲ್ಲದೇ ಇಶಾಂತ್ ಶರ್ಮಾರನ್ನು ಕೂಡ ತಂಡದಿಂದ ಕೈ ಬಿಡಲಾಗಿತ್ತು. ಈ ಕುರಿತೂ ಬಿಸಿಸಿಐ  ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು, ಪ್ರಸ್ತುತ ರೋಹಿತ್ ಶರ್ಮಾ ಎನ್ ಸಿಎ ನಲ್ಲಿ ತರಬೇತಿಯಲ್ಲಿದ್ದು, ಐಪಿಎಲ್ ಟೂರ್ನಿ ವೇಳೆ ಅವರು ಹ್ಯಾಮ್ ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಡಿಸೆಂಬರ್ 11ರಂದು ಫಿಟ್ನೆಸ್ ಪರೀಕ್ಷೆಗೊಳಪಡಲಿದ್ದಾರೆ.  ರೋಹಿತ್ ಶರ್ಮಾ ಜೊತೆ ವೃದ್ದಿಮಾನ್ ಸಹಾ ಕೂಡ ಫಿಟ್ನೆಸ್ ಪರೀಕ್ಷೆಗೊಳಪಡಲಿದ್ದಾರೆ ಎಂದು ಹೇಳಿದರು.

ಇನ್ನು ರೋಹಿತ್ ಫಿಟ್ ಆದರೂ ಆಸ್ಟ್ರೇಲಿಯಾ ಕೋವಿಡ್ ನಿಯಮಾವಳಿ ಅನುಸಾರ 14 ದಿನಗಳ ಕ್ವಾರಂಟೈನ್ ಗೆ ಒಳಪಡಬೇಕಾಗುತ್ತದೆ. ಡಿಸೆಂಬರ್ 12ಕ್ಕೆ ರೋಹಿತ್‌ಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲು ಅವಕಾಶ ನೀಡಿದರೂ ಅವರು ಪ್ರಯಾಣಿಸುತ್ತಾರೆಯೇ? ಅಲ್ಲಿ ಯಾವುದೇ ವಾಣಿಜ್ಯ  ವಿಮಾನಗಳಿಲ್ಲ. ಹಾಗೂ ರೋಹಿತ್ ಆಸ್ಟ್ರೇಲಿಯಾಕ್ಕೆ ಹೋದರೂ ಮತ್ತೆ ಎರಡು ವಾರಗಳ ಕ್ವಾರಂಟೈನ್ ಪಾಲಿಸಬೇಕು. ಕ್ವಾರಂಟೈನ್ ಪಾಲಿಸಿದ ಮೇಲೆ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳಬೇಕಾದರೆ ಫಿಟ್ನೆಸ್ ಸಂಗತಿಯಾಗುತ್ತದೆ ಎಂದು ಬಿಸಿಸಿಐ ಹೇಳಿದೆ.

ಮೂಲಗಳ ಪ್ರಕಾರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಆಸಿಸ್ ಸರ್ಕಾರದೊಂದಿಗೆ ಈ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದ್ದು, ರೋಹಿತ್ ಶರ್ಮಾ ಅವರಿಗಾಗಿ ಕ್ವಾರಂಟೈನ್ ನಿಯಮ ಸಡಿಲಿಸುವಂತೆ ಮನವಿ ಮಾಡಲಿದ್ದಾರೆ. ಸೆಪ್ಟೆಂಬರ್ 17ರಿಂದ  ಟೆಸ್ಟ್ ಸರಣಿ ಶುರುವಾಗಲಿದೆ. ಅಲ್ಲಿಂದ ಜನವರಿ 19ರ ವರೆಗೆ ಟೆಸ್ಟ್ ಸರಣಿ ನಡೆಯಲಿದೆ. ಭಾರತ-ಆಸ್ಟ್ರೇಲಿಯಾ ಸರಣಿ 3 ಏಕದಿನ, 3 ಟಿ20ಐ ಮತ್ತು 4 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿದೆ. ಇದರಲ್ಲಿ ಒಂದು ಡೇ-ನೈಟ್ ಟೆಸ್ಟ್ ಕೂಡ ಸೇರಿದೆ. 
 

SCROLL FOR NEXT