ಕ್ರಿಕೆಟ್

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಫ್ಘಾನಿಸ್ತಾನದ ಟಾಪ್ ಕ್ರಿಕೆಟಿಗ ನಿಧನ

Srinivasamurthy VN

ಕಾಬುಲ್: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಫ್ಘಾನಿಸ್ತಾನದ ಟಾಪ್ ಕ್ರಿಕೆಟಿಗ ನಜೀಬ್ ತಾರಕೈ(29) ಮಂಗಳವಾರ ಸಾವನ್ನಪ್ಪಿದ್ದಾರೆ. 

ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ನಬೀಜ್ ಅವರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ನಜೀಬ್ ಅವರು ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಜೀಬ್ ಅವರು ಕೋಮಾಗೆ ಹೋಗಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ವರದಿಗಳು ತಿಳಿಸಿವೆ. 

ಈ ಬಗ್ಗೆ ಆಫ್ಘಾನಿಸ್ತಾನದ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿದ್ದು, ನಜೀಬ್ ಅವರ ಸಾವನ್ನು ಖಚಿತಪಡಿಸಿದೆ. ಆರಂಭಿಕ ಬ್ಯಾಟ್ಸ್ ಮನ್ ಹಾಗೂ ಉತ್ತಮ ವ್ಯಕ್ತಿಯನ್ನು ನಾವು ಕಳೆದುಕೊಂಡುವುದಕ್ಕೆ ಸಂತಾಪ ಸೂಚಿಸುತ್ತೇವೆ. ದೇವರು ಅವರ ಮೇಲೆ ಕರುಣೆ ತೋರಲಿ ಎಂದು ತಿಳಿಸಿದೆ. 

ಕಳೆದವಾರ ಟ್ವೀಟ್ ಮಾಡಿದ್ದ ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು, ಜಲಾಲಬಾದ್ ನಲ್ಲಿ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿರುವ ನಜೀಬ್ ಸ್ಥಿತಿ ಗಂಭೀರವಾಗಿದೆ. ಘಟನೆಯಿಂದ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಕೋಮಾದಲ್ಲಿದ್ದಾರೆ ಎಂದು ತಿಳಿಸಿತ್ತು. 

ನಜೀಬ್ ಅವರು 2014ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ನಲ್ಲಿ ನಜೀಬ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಅಫ್ಘಾನಿಸ್ತಾನದ ಪರ 12 ಟಿ20 ಮತ್ತು ಅಂತಾರಾಷ್ಟ್ರೀಯ ಏಕದಿನ ಪಂದ್ಯವೊಂದನ್ನು ಆಡಿದ್ದರು.

SCROLL FOR NEXT