ಕ್ರಿಕೆಟ್

'ಕೋವಿಡ್-19 ಯೋಧ' ವೈದ್ಯರ ಸೇವೆಗೆ ಆರ್ ಸಿಬಿ ದಿಗ್ಗಜರು ಕ್ಲೀನ್ ಬೋಲ್ಡ್; ರಾಯಲ್ ಗೌರವ

Srinivas Rao BV

ಭೋಪಾಲ್: ಕೊರೋನಾ ಯೋಧರನ್ನು ಗೌರವಿಸುವ ನಿಟ್ಟಿನಲ್ಲಿ ಆರ್ ಸಿಬಿ ತಂಡದ ಆಟಗಾರರು ಕೋವಿಡ್-19 ಯೋಧರ ಹೆಸರನ್ನು ಜರ್ಸಿಯ ಮೇಲೆ ಧರಿಸಿ ಪಂದ್ಯವನ್ನ ಆಡಲಿರುವುದು ಗೊತ್ತೇ ಇದೆ. ಈ ಸಾಲಿಗೆ ಈಗ ಮಧ್ಯಪ್ರದೇಶದ ವೈದ್ಯರೊಬ್ಬರು ಸೇರ್ಪಡೆಯಾಗಿದ್ದಾರೆ. 

ಕೊರೋನಾ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿದ್ದ ವೈದ್ಯ ಡಾ. ಸಚಿನ್ ನಾಯ್ಕ್ ತಾವೂ ಸಹ ಕೋವಿಡ್-19 ಸೋಂಕು ಹರಡಬಾರದೆಂಬ ಕಾರಣಕ್ಕಾಗಿ ಒಂದು ವಾರಗಳ ಕಾಲ ಕಾರನ್ನೇ ತಮ್ಮ ಮನೆಯನ್ನಾಗಿಸಿಕೊಂಡಿದ್ದರು. ಕೋವಿಡ್-19 ವೈದ್ಯರ ಈ ಸೇವೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಗುರುತಿಸಿ, ಅವರ ಹೆಸರನ್ನು ಜರ್ಸಿಯ ಮೇಲೆ ಧರಿಸಿ ಪಂದ್ಯವಾಡುವ ಮೂಲಕ ಅವರ ಸೇವೆಯನ್ನು ಗೌರವಿಸಲಿದ್ದಾರೆ. 

ಟೀಂ ಇಂಡಿಯಾ ಹಾಗೂ ಆರ್ ಸಿಬಿಯ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಡಾ. ಸಚಿನ್ ನಾಯ್ಕ್ ಅವರ ಹೆಸರು ಇರುವ ಜರ್ಸಿಯನ್ನು ಧರಿಸಿ ಕ್ರೀಡಾಂಗಣಕ್ಕೆ ಇಳಿಯಲಿದ್ದಾರೆ. 

ಈಗ ತಮ್ಮ ತವರು ಜಿಲ್ಲೆ ಶಾಜಾಪುರದಲ್ಲಿ ಸೇವೆ ಸಲ್ಲಿಸುತ್ತಿರುವ ಅರಿವಳಿಕೆ ತಜ್ಞ ಡಾ. ಸಚಿನ್ ನಾಯ್ಕ್, ಏಪ್ರಿಲ್ ತಿಂಗಳಲ್ಲಿ ಮಧ್ಯಪ್ರದೇಶ ಸರ್ಕಾರದ ಜೆಪಿ ಆಸ್ಪತ್ರೆಯಲ್ಲಿ ಕೋವಿಡ್-19 ಚಿಕಿತ್ಸಾ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು. 

ಇವರೊಂದಿಗೆ ಆರ್ ಸಿಬಿ ತಂಡದ ವಿರಾಟ್ ಕೊಹ್ಲಿ, ಸ್ಪಿನ್ನರ್ ಚಹಾಲ್, ಎಬಿಡಿ ವಿಲ್ಲರ್ಸ್ ವೆಬಿನಾರ್ ಮೂಲಕ ಸಂವಾದ ನಡೆಸಿದ್ದಾರೆ. "ಕ್ರಿಕೆಟ್ ದಿಗ್ಗಜರೊಂದಿಗೆ ಮಾತನಾಡುತ್ತಾ ತಮ್ಮ ಅನುಭವಗಳನ್ನು ಹಂಚಿಕೊಂಡಿರುವ ಡಾ. ಸಚಿನ್ ನಾಯ್ಕ್, ಕೋವಿಡ್-19 ಕರ್ತವ್ಯ ನಿಭಾಯಿಸುವ ಬದಲು ಕೆಲಸಕ್ಕೆ ರಾಜೀನಾಮೆ ನೀಡಿ ಬರುವಂತೆ ಕುಟುಂಬ ಸದಸ್ಯರ ಒತ್ತಡವಿತ್ತು. ಆದರೆ ಅದಾಗಲೇ ವೈದ್ಯರ ಕೊರತೆ ಎದುರಾಗಿದ್ದರಿಂದ ನನಗೆ ಆ ರೀತಿ ಮಾಡಲು ಮನಸಿರಲಿಲ್ಲ. ಮತ್ತೊಂದೆಡೆ ನಾನು ಕೋವಿಡ್-19 ಕರ್ತವ್ಯದಲ್ಲಿದ್ದುಕೊಂಡು ಕುಟುಂಬ ಸದಸ್ಯರಿಗೆ ಹಾಗೂ ಬೇರೆಯವರಿಗೆ ಕೋವಿಡ್-19 ಸೋಂಕು ಹರಡಿಸದಂತೆಯೂ ಮುನ್ನೆಚ್ಚರಿಕೆ ವಹಿಸಬೇಕಿತ್ತು. ಹೀಗಾಗಿ ಸಣ್ಣ ರೂಮ್ ಅಥವಾ ಹೋಟೆಲ್ ರೂಮ್ ನ್ನು ಬಾಡಿಗೆಗೆ ಪಡೆಯಲು ಪ್ರಯತ್ನಿಸಿದೆ ಆದರೆ ಎಲ್ಲೂ ಸಿಗಲಿಲ್ಲ. ಕೊನೆಗೆ ನನ್ನ ಕಾರನ್ನೇ ನಾನು ರೂಮ್ ಆಗಿ ಮಾಡಿಕೊಂಡು ಒಂದು ವಾರಗಳ ಕಾಲ ಅಲ್ಲಿಯೇ ಇದ್ದೆ ಎಂದು ಹೇಳಿದ್ದಾರೆ. 

ವೈದ್ಯರ ಸಾಧನೆಗೆ ಕ್ರಿಕೆಟ್ ದಿಗ್ಗಜರು ಕ್ಲೀನ್ ಬೋಲ್ಡ್ ಆಗಿದ್ದು, ತಮ್ಮ ಹೆಸರಿರುವ ಜರ್ಸಿಯನ್ನು ಧರಿಸಿ ಪಂದ್ಯ ಆಡುವುದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.

SCROLL FOR NEXT