ನವದೆಹಲಿ: ಕೊರೋನಾ ವೈರಸ್ ಸಾಂಕ್ರಾಮಿಕದ ನಡುವೆಯೇ ಯುಎಇಯಲ್ಲಿ ಆಯೋಜನೆಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್-2020)ನಲ್ಲಿ ಕೋವಿಡ್-19 ಪರೀಕ್ಷೆಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಬರೊಬ್ಬರಿ 10 ಕೋಟಿ ರೂಗಳನ್ನು ವ್ಯಯಿಸಲಿದೆ.
ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದ್ದು, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕೋವಿಡ್–19 ಸೋಂಕು ಪರೀಕ್ಷೆಗಾಗಿ ಅಂದಾಜು 10 ಕೋಟಿ ವೆಚ್ಚ ಮಾಡಲಿದೆ. ಇದೇ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯಲ್ಲಿ 20 ಸಾವಿರಕ್ಕೂ ಅಧಿಕ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತಿದೆ. ಇದಕ್ಕಾಗಿ ಬಿಸಿಸಿಐ 10 ಕೋಟಿ ರೂಗಳನ್ನು ಮೀಸಲಿಟ್ಟಿದೆ ಎನ್ನಲಾಗಿದೆ.
ಈ ಹಿಂದೆ ಭಾರತದಲ್ಲಿ ನಡೆಸಿದ ಕೋವಿಡ್-19 ಪರೀಕ್ಷೆಗಳ ವೆಚ್ಚವನ್ನು ಫ್ರ್ಯಾಂಚೈಸಿಗಳು ಭರಿಸಿದ್ದವು. ಆದರೆ ಯುಎಇಯಲ್ಲಿ ಆಗಸ್ಟ್ 20ರಿಂದ ನಡೆಯುತ್ತಿರುವ ಆರ್ಟಿಪಿಸಿಆರ್ ಪರೀಕ್ಷೆಗಳ ಖರ್ಚನ್ನು ಬಿಸಿಸಿಐ ಭರಿಸುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಐಪಿಎಲ್ ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, 'ಕೋವಿಡ್-19 ಪರೀಕ್ಷೆಯ ಜವಾಬ್ದಾರಿಯನ್ನು ವಿಪಿಎಸ್ ಹೆಲ್ತ್ಕೇರ್ ಸಂಸ್ಥೆಗೆ ವಹಿಸಲಾಗಿದೆ. ಟೂರ್ನಿ ವೇಳೆ ಆಟಗಾರರು ಹಾಗೂ ಸಿಬ್ಬಂದಿಗೆ ಸೇರಿ ಅಂದಾಜು 20 ಸಾವಿರಕ್ಕಿಂತ ಹೆಚ್ಚಿನ ಪರೀಕ್ಷೆಗಳು ನಡೆಯಬಹುದು. ಪ್ರತಿ ಟೆಸ್ಟ್ಗೆ ಬಿಸಿಸಿಐ ಅಂದಾಜು 4000 ರೂ (200 ದಿರ್ಹಾಮ್) (ತೆರಿಗೆ ಹೊರತುಪಡಿಸಿ) ಖರ್ಚು ಮಾಡಲಿದೆ. ವಿಪಿಎಸ್ ಸಂಸ್ಥೆಯ 75 ಸಿಬ್ಬಂದಿ ಕೋವಿಡ್ ತಪಾಸಣೆ ನಡೆಸಲಿದ್ದಾರೆ. ಆಟಗಾರರು ಹಾಗೂ ಅಧಿಕಾರಿಗಳ ಸುರಕ್ಷತೆಯೇ ನಮ್ಮ ಆದ್ಯತೆ. ಹೀಗಾಗಿ ಆರೋಗ್ಯ ಸಿಬ್ಬಂದಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಆರೋಗ್ಯ ಸಿಬ್ಬಂದಿಯ ಹೊಟೆಲ್ ಖರ್ಚನ್ನು ಬಿಸಿಸಿಐ ಪಾವತಿಸುತ್ತಿಲ್ಲ. ಅದನ್ನು ಹೆಲ್ತ್ಕೇರ್ ಸಂಸ್ಥೆಯೇ ನೋಡಿಕೊಳ್ಳುತ್ತದೆ. ಆಗಸ್ಟ್ 20ರಿಂದ 28ರವರೆಗೆ ಒಟ್ಟು 1988 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಹೇಳಿದ್ದಾರೆ.