ಕ್ರಿಕೆಟ್

ಆರ್‌ಸಿಬಿಯಲ್ಲಿದ್ದ ಡೆತ್‌ ಬೌಲಿಂಗ್‌ ಸಮಸ್ಯೆ ಬಗೆಹರಿದಿದೆ: ಯುವ ಸ್ಪಿನ್ನರ್ ಯಜ್ವೇಂದ್ರ ಚಹಲ್‌

Vishwanath S

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಹಿಂದಿನ ಕೆಲ ಆವೃತ್ತಿಗಳಲ್ಲಿ ಬ್ಯಾಟಿಂಗ್ ನಷ್ಟು ಬಲಿಷ್ಟವಾಗಿ ಬೌಲಿಂಗ್ ವಿಭಾಗವಿರಲಿಲ್ಲ. ಈ ಕಾರಣದಿಂದಲೇ ಬ್ಯಾಟಿಂಗ್ ನಲ್ಲಿ ಎಷ್ಟೇ ದೊಡ್ಡ ಮೊತ್ತದ ಗುರಿ ನೀಡಿದ್ದರೂ ಬೌಲಿಂಗ್ ಸಂಯೋಜನೆ ಸರಿ ಇಲ್ಲದ ಕಾರಣ ಆರ್ ಸಿಬಿ ಪ್ರತಿ ಬಾರಿಯೂ ಎದುರಾಳಿ ತಂಡವನ್ನು ನಿಯಂತ್ರಿಸುವಲ್ಲಿ ವಿಫಲವಾಗುತ್ತಿತ್ತು. 

ಈ ಬಗ್ಗೆ ಮಾತನಾಡಿರುವ ಆರ್ ಸಿಬಿ ಸ್ಪಿನ್ನರ್ ಯಜ್ವೇಂದ್ರ ಚಹಲ್ ಈ ಬಾರಿ ತಂಡದಲ್ಲಿ ಡೆತ್ ಬೌಲಿಂಗ್ ಸಮಸ್ಯೆ ಬಗೆಹರಿದಿದೆ ಎಂದು ಹೇಳಿದ್ದಾರೆ. ಆ ಮೂಲಕ ಮುಂಬರುವ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಐಪಿಎಲ್ ಗೆಲುವಿನ ಮೇಲೆ ಕಣ್ಣಿಟ್ಟಿದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ನವದೀಪ್ ಸೈನಿ, ಕ್ರಿಸ್ ಮೋರಿಸ್ ಹಾಗೂ ಉಮೇಶ್ ಯಾದವ್ ಅವರನ್ನು ಡೆತ್ ಓವರ್ ಗಳಲ್ಲಿ ಉಪಯೋಗಿಸಿಕೊಳ್ಳಬಹುದು. ಯುಎಇ ವಿಕೆಟ್ ನಲ್ಲಿ ಎಲ್ಲರೂ ಬೌಲಿಂಗ್ ಮಾಡಲು ಸಿದ್ದರಿದ್ದಾರೆ. ಸ್ಪಿನ್ನರ್ ಗಳು ಕೂಡ ಕೆಲ ಓವರ್ ಗಳಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬಹುದು ಎಂದು ಚಹಲ್ ಹೇಳಿದರು.

ಡೆತ್ ಓವರ್ ಗಳ ಸಮಸ್ಯೆಯನ್ನು ನಾವು ಬಗೆಹರಿಸಿದ್ದೇವೆ. ನಮ್ಮ ಬಳಿ ಡೇಲ್ ಸ್ಟೈಯ್ನ್ ಸರ್ ನವದೀಪ್ ಸೈನಿ, ಕ್ರಿಸ್ ಮೋರಿಸ್ ಹಾಗೂ ಉಮೇಶ್ ಯಾದವ್ ಭಾಯ್ ಇದ್ದಾರೆ. ಹಾಗಾಗಿ ಕೊನೆಯ ಕೆಲ ಓವರ್ ಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವ ಹಾಗೆಯೇ ಇಲ್ಲ, ಏಕೆಂದರೆ ನಮ್ಮವರೆಲ್ಲರೂ ಬೌಲಿಂಗ್ ಮಾಡಲು ಸಿದ್ದರಿದ್ದಾರೆ ಹಾಗೂ ಸ್ಪಿನ್ನರ್ ಗಳು ಕೆಲ ಓವರ್ ಗಳಲ್ಲಿ ಪ್ರಾಬಲ್ಯ ಸಾಧಿಸಬಹುದು ಎಂದು ಯಜ್ವೇಂದ್ರ ಚಹಲ್ ತಿಳಿಸಿದರು.

ವಿಶ್ವದ ಕೆಲ ಸ್ಟಾರ್ ಆಟಗಾರರು ಹಾಗೂ ಯುವ ಪ್ರತಿಭೆಗಳೊಂದಿಗಿನ ಪ್ರಯೋಗದ ಹೊರತಾಗಿಯೂ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಮ್ಮೆಯೂ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಮೂರು ಬಾರಿ ಆರ್ ಸಿಬಿ ಫೈನಲ್ ತಲುಪಿ ರನ್ನರ್ ಅಪ್ ಗೆ ತೃಪ್ತಿಪಟ್ಟಿತ್ತು. ಕೊನೆಯ ಬಾರಿ 2016ರಲ್ಲಿ ಆರ್ ಸಿಬಿ ಫೈನಲ್ ತಲುಪಿತ್ತು. ನಂತರದ ಆವೃತ್ತಿಗಳಲ್ಲಿ ಕೊಹ್ಲಿ ಪಡೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. 2019ರ ಆವೃತ್ತಿಯಲ್ಲಿ ಆರ್ ಸಿಬಿ 14 ಪಂದ್ಯಗಳಿಂದ ಕೇವಲ ಐದು ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿತ್ತು.

ಕ್ರಿಸ್ ಗೇಲ್, ಕ್ಯಾಪ್ಟನ್ ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್ ಸೇರಿದಂತೆ ವಿಶ್ವದ ತಾರಾ ಆಟಗಾರರನ್ನು ಹೊಂದಿದ್ದರೂ ಆರ್ ಸಿಬಿ, ಬೌಲಿಂಗ್ ವಿಭಾಗದಲ್ಲಿ ಸಮಸ್ಯೆ ಎದುರಿಸಿದ್ದರಿಂದ ಒಂದೇ ಒಂದು ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಮಿಚೆಲ್ ಸ್ಟ್ಯಾರ್ಕ್ ಗಾಯದಿಂದಾಗಿ ಹಲವು ಆವೃತ್ತಿಗಳಿಂದ ಹೊರ ಉಳಿದಿದ್ದರು.

13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಇದೇ 19 ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಆರ್ ಸಿಬಿ ತನ್ನ ಮೊದಲನೇ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 21 ರಂದು ಆಡಲಿದೆ.

SCROLL FOR NEXT