ಕ್ರಿಕೆಟ್

ಖಾಲಿ ಮೈದಾನ ಆರ್ ಸಿಬಿಯ ತೀಕ್ಷ್ಣ ಆಟಕ್ಕೆ ಸಮಸ್ಯೆಯಾಗುವುದಿಲ್ಲ: ವಿರಾಟ್ ಕೊಹ್ಲಿ

Srinivasamurthy VN

ದುಬೈ: ಅಭಿಮಾನಿಗಳಿಲ್ಲದ ಖಾಲಿ ಮೈದಾನ ಆರ್ ಸಿಬಿಯ ತೀಕ್ಷ್ಣ ಆಟಕ್ಕೆ ಸಮಸ್ಯೆಯಾಗುವುದಿಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಕೊರೋನಾ ಸಂಕಷ್ಟದಿಂದಾಗಿ ಪ್ರೇಕ್ಷಕರಿಲ್ಲದೇ ಜೈವಿಕ ಕಟ್ಟುಪಾಡುಗಳ ನಡುವೆ ನಡೆಯುತ್ತಿರುವ ಐಪಿಎಲ್ 13 ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ನಾಗರಿಕ ಕೊವಿಡ್ ಹೀರೋಗಳನ್ನು ಅಭಿನಂದಿಸಲು ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ವಿರಾಟ್ ಕೊಹ್ಲಿ, ಕೊರೋನಾ ಸಾಂಕ್ರಾಮಿಕದ ನಡುವೆ ನಾವು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ನಿಜ ಹೇಳಬೇಕೆಂದರೆ ನಮ್ಮ ಸುತ್ತಮುತ್ತಲಿನ ಪರಿಸ್ಥಿತಿಯನ್ನು ನಾವು ಹೆಚ್ಚು  ಒಪ್ಪಿಕೊಂಡು ಅರ್ಥೈಸಿಕೊಳ್ಳುತ್ತಿದ್ದೇವೆ. ಹಾಲಿ ಪರಿಸ್ಥಿತಿಯನ್ನು ನಾವು ಸ್ವೀಕರಿಸಲೇಬೇಕಿದೆ. ಅಂಗೀಕಾರವು ನಾನು ಅನುಭವಿಸಿದ ಅತಿದೊಡ್ಡ ಬದಲಾವಣೆಯಾಗಿದೆ. ಪ್ರೇಕ್ಷಕರಿಲ್ಲದೇ ಅಥವಾ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಮೊದಲ ಬಾರಿಗೆ ಐಪಿಎಲ್ ಪಂದ್ಯಗಳನ್ನು ಆಡುತ್ತಿದ್ದೇವೆ. ನಿಜಕ್ಕೂ ಇದು ವಿಚಿತ್ರ ಅನುಭವ  ನೀಡುತ್ತಿದೆ.

ತರಬೇತಿ ಪಂದ್ಯಗಳು ಮತ್ತು ತರಬೇತಿಯಲ್ಲಿ ನಾವು ಕಳೆದ ಸಮಯ ಈ ಕುರಿತಂತೆ ಹೊಸ ರೀತಿಯ ಅನುಭವ ನೀಡಿದೆ. ಪ್ರೇಕ್ಷಕರು ಇಲ್ಲ ಅಥವಾ ಅಭಿಮಾನಿಗಳು ಇಲ್ಲ ಎಂದ ಮಾತ್ರಕ್ಕೆ ನಮ್ಮ ತಂಡದ ತೀಕ್ಷ್ಣ ಆಟ ಕಡಿಮೆಯಾಗುವುದಿಲ್ಲ. ನಮ್ಮ ಆಟ ಅದೇ ಮೊನಚಿನಿಂದ ಕೂಡಿರುತ್ತದೆ. ನಾನು ನಿಮಗೆ ಭರವಸೆ  ನೀಡುತ್ತೇನೆ. ಆರ್ ಸಿಬಿಯ ಪ್ರತೀ ಪಂದ್ಯವೂ ಅಭಿಮಾನಿಗಳಿಗೆ ಮನರಂಜನೆ ನೀಡುತ್ತದೆ ಎಂದು ಕೊಹ್ಲಿ ಹೇಳಿದರು.

ಇದೇ ವೇಳೆ ಮಾತನಾಡಿದ ತಂಡದ ಮತ್ತೋರ್ವ ಆಟಗಾರ ದೇವದತ್ ಪಡಿಕ್ಕಲ್ ಅವರು ಈ ಹಿಂದಿನ ಎಲ್ಲ ಕ್ರಿಕೆಟ್ ಟ್ರಿಕ್ ಗಳನ್ನು ಮರು ಪರಿಶೀಲಿಸಬೇಕಾಗುತ್ತದೆ. ಕೊರೋನಾ ಸಾಂಕ್ರಾಮಿಕ ಕಾರಣದಿಂದಾಗಿ ನಾವು ಚೆಂಡಿನ ಮೇಲೆ ನಮ್ಮ ಎಂಜಲು ಹಾಕುವಂತಿಲ್ಲ. ಈ ಬಗ್ಗೆ ನಾವು ಕಠಿಣವಾಗಿ ಶಿಸ್ತು ಪಾಲನೆ  ಮಾಡುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ನಾನು ಐಪಿಎಲ್ ನಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಆದರೆ ಎಂದಿಗೂ ಪ್ರೇಕ್ಷಕರಿಲ್ಲದೇ ಕ್ರೀಡಾಂಗಣದಲ್ಲಿ ಆಟವಾಡಿಲ್ಲ ಎಂದು ಹೇಳಿದರು. 

SCROLL FOR NEXT