ಕ್ರಿಕೆಟ್

ಕೊಹ್ಲಿ ವೈಫಲ್ಯಕ್ಕೆ ಅನುಷ್ಕಾಳನ್ನು ದೂರಿಲ್ಲ, ನಟಿ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ: ಗವಾಸ್ಕರ್ ಸ್ಪಷ್ಟನೆ

Lingaraj Badiger

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ವೈಫಲ್ಯಕ್ಕೆ ಅವರ ಪತ್ನಿ ಅನುಷ್ಕಾ ಶರ್ಮಾ ಅವರನ್ನು ದೂರಿಲ್ಲ ಮತ್ತು ಅವರ ಬಗ್ಗೆ ನಾನು ಕೆಟ್ಟದಾಗಿ ಮಾತನಾಡಿಲ್ಲ ಎಂದು ಮಾಜಿ ಕ್ರಿಕೆಟಿಗ ಮತ್ತು ವಿಶ್ಲೇಷಕ ಸುನಿಲ್ ಗವಾಸ್ಕರ್ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.

ಕಿಂಗ್ಸ್‌ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರು ಕಳಪೆ ಪ್ರದರ್ಶನ ತೋರಿದ್ದರು. ಈ ವೇಳೆ ಕಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಅವರು ಕೊಹ್ಲಿ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿ ಅವರ ಪತ್ನಿ ಅನುಷ್ಕಾಳನ್ನು ಎಳೆದು ತಂದಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಗವಾಸ್ಕರ್ ಅವರು, ನಾನು ಅಕಾಶ್ ಚೋಪ್ರಾ ಹಿಂದಿ ಮಾಧ್ಯಮವೊಂದಕ್ಕೆ ಕಮೆಂಟರಿ ಮಾಡುತ್ತಿದ್ದೇವು. ಆಗ ಅಕಾಶ್ ಆಟಗಾರರಿಗೆ ಅಭ್ಯಾಸ ಮಾಡಲು ಕಮ್ಮಿ ಸಮಯ ಸಿಕ್ಕಿದೆ ಎಂದರು. ಅದಕ್ಕೆ ನಾನು ಹೌದು ರೋಹಿತ್ ಶರ್ಮಾ ಕೂಡ ಮೊದಲ ಪಂದ್ಯದಲ್ಲಿ ಸರಿಯಾಗಿ ಬ್ಯಾಟ್ ಬೀಸಲಿಲ್ಲ. ಧೋನಿ ಕೂಡ ಸರಿಯಾಗಿ ಆಡಲಿಲ್ಲ. ಈಗ ಕೊಹ್ಲಿ ಕೂಡ ಬ್ಯಾಟ್ ಮಾಡಲು ಕಷ್ಟ ಪಡುತ್ತಿದ್ದಾರೆ ಎಂದಿದ್ದೆ.

ಇದರ ಮುಂದುವರಿದ ಭಾಗವಾಗಿ ನಾನು, ಕೊರೋನಾ ಲಾಕ್‍ಡೌನ್ ಸಮಯದಲ್ಲೂ ಕೂಡ ವಿರಾಟ್ ಅಭ್ಯಾಸ ಮಾಡಿರಲಿಲ್ಲ. ಅವರು ಅವರ ಪತ್ನಿ ಅನುಷ್ಕಾ ಜೊತೆ ಟಿನ್ನಿಸ್ ಬಾಲಿನಲ್ಲಿ ಅವರ ಅಪಾರ್ಟ್‍ಮೆಂಟ್ ಒಳಗೆ ಅಭ್ಯಾಸ ಮಾಡುತ್ತಿದ್ದರು ಎಂದಿದ್ದೇನೆ. ಕೊರೋನಾ ಲಾಕ್‍ಡೌನ್ ಸಮಯದಲ್ಲಿ ವಿರಾಟ್ ಮತ್ತು ಅನುಷ್ಕಾ ಕ್ರಿಕೆಟ್ ಆಡುತ್ತಿರುವ ವಿಡಿಯೋ ವೈರಲ್ ಆಗಿತ್ತು ಇದನ್ನು ಗಮನದಲ್ಲಿಟ್ಟುಕೊಂಡು ಆ ರೀತಿ ಹೇಳಿದ್ದೇನೆ ಎಂದು ಗವಾಸ್ಕರ್ ವಿವಾದಕ್ಕೆ ತೆರೆ ಎಳಿದ್ದಾರೆ.

ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಅನುಷ್ಕಾ ಜೊತೆ ಕೊಹ್ಲಿ ಕ್ರಿಕೆಟ್ ಆಡಿದ್ದಾರೆ. ಅನುಷ್ಕಾ ಬೌಲಿಂಗ್‍ಗೆ ಕೊಹ್ಲಿ ಬ್ಯಾಟ್ ಮಾಡಿದ್ದಾರೆ ಎಂದು ಹೇಳುವುದು ತಪ್ಪಾ? ಇದರಲ್ಲಿ ಯಾವ ಪದ ಅಸಭ್ಯವಾಗಿದೆ. ಇದರಲ್ಲಿ ನಾನು ಯಾವುದನ್ನು ಸೆಕ್ಸಿಯಾಗಿ ಹೇಳಿದ್ದೇನೆ. ಕೇವಲ ನಾನು ವೈರಲ್ ಆದ ವಿಡಿಯೋವನ್ನು ಮನದಲ್ಲಿಟ್ಟುಕೊಂಡು ಮಾತನಾಡಿದ್ದೇನೆ. ಕೊರೋನಾ ಸಮಯದಲ್ಲಿ ಅವರು ಅಭ್ಯಾಸ ಮಾಡಿಲ್ಲ ಎಂಬುದನ್ನು ನಾನು ಹೇಳಿದ್ದೇನೆ. ಇದರಲ್ಲಿ ಏನೂ ತಪ್ಪಿದೆ ಎಂದು ಗವಾಸ್ಕರ್ ಪ್ರಶ್ನೆ ಮಾಡಿದ್ದಾರೆ.

SCROLL FOR NEXT